ಬೆಂಗಳೂರು: ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದ ಇಬ್ಬರು ಅಪ್ರಾಪ್ತರು ಸೇರಿ ಮೂವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲೂರು ಮೂಲದ ಆರೋಪಿ ಬಂಧಿತ. ಉಳಿದಿಬ್ಬರು ಅಪ್ರಾಪ್ತರಾಗಿದ್ದು, ಬಾಲ ನ್ಯಾಯಮಂಡಳಿಗೆ ಹಾಜರುಪಡಿಸಲಾಗಿದೆ. ಮೂರು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಆರೋಪಿಗಳು ಅಪ್ರಾಪ್ತೆಯ ಇನ್ಸ್ಟಾಗ್ರಾಮ್ ಖಾತೆಯಿಂದ ಫೋಟೋ ತೆಗೆದುಕೊಂಡು, ಅಶ್ಲೀಲವಾಗಿ ಮಾರ್ಫ್ ಮಾಡಿ ನಕಲಿ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನೆಲಮಂಗಲ ಟೌನ್ ಪೊಲೀಸರಿಂದ ಭರ್ಜರಿ ಬೇಟೆ: ಮನೆಗಳ್ಳತನ, ಸರಗಳ್ಳತನದಲ್ಲಿ ಭಾಗಿಯಾದ್ದ ಖದೀಮರ ಬಂಧನ - thieves Arrested
ಮೂವರು ಆರೋಪಿಗಳ ಪೈಕಿ ಓರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಉಳಿದಿಬ್ಬರು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಮೂವರೂ ಪರಸ್ಪರ ಸ್ನೇಹಿತರು. ಕ್ರೇಜ್‌ಗಾಗಿ ಯುವತಿಯರ ಫೋಟೋಗಳನ್ನು ತೆಗೆದುಕೊಂಡು ಅಶ್ಲೀಲವಾಗಿ ಮಾರ್ಫ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸುವ ಮುನ್ನ ಯೋಚಿಸಬೇಕು. ಇಲ್ಲವಾದರೆ, ಮಕ್ಕಳು ಹೀಗೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹಣ ಕದ್ದು ಹಂಚಿಕೊಂಡಿದ್ದ ಅಕ್ಕ - ತಮ್ಮನ ಬಂಧನ