ಬೆಂಗಳೂರು: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಿಜೆಪಿ ನಾಲ್ಕು ಅವಧಿಯಲ್ಲೂ ಸ್ಥಾನ ಬಿಟ್ಟುಕೊಟ್ಟಿಲ್ಲ. ಆದರೆ, ಇದೀಗ ಪಂಚ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಕೈ ವಶಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಹಲವು ರಾಜಕೀಯ ಇತಿಹಾಸವನ್ನು ಹೊಂದಿದ್ದು, ಘಟಾನುಘಟಿ ನಾಯಕರನ್ನು ಸಂಸತ್‌ಗೆ ಕಳುಹಿಸಿದೆ. ಅದಲ್ಲದೇ ಸಿ.ಕೆ. ಜಾಫರ್ ಶರೀಫ್ ಅವರನ್ನು 7 ಬಾರಿ ಈ ಕ್ಷೇತ್ರದ ಮತದಾರರು ಗೆಲ್ಲಿಸಿ ಸಂಸತ್‌ಗೆ ಕಳುಹಿಸಿರುವುದು ಮತ್ತೊಂದು ವಿಶೇಷ. ಇಲ್ಲಿ ಮೊದಲ ಎರಡು ಚುನಾವಣೆ ಹೊರತುಪಡಿಸಿ ಉಳಿದ ಚುನಾವಣೆಗಳಲ್ಲಿ ಗೆದ್ದವರೆಲ್ಲ ಕ್ಷೇತ್ರದ ಹೊರಗಿನವರೇ ಎಂಬುದು ಗಮನಿಸಬೇಕಾದ ಅಂಶ. ಈ ಹಿಂದೆ ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ, ಈಗ ಬಿಜೆಪಿಯ ಭದ್ರಕೋಟೆಯಾಗಿ ಬದಲಾಗಿದೆ.
ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷದ ಆಂತರಿಕ ಸಮಸ್ಯೆ, ಗೊಂದಲಗಳ ಕಾರಣದಿಂದಾಗಿ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರಕ್ಕೆ ವರ್ಗಾವಣೆಯಾಗಿದ್ದಾರೆ. ಆದರೆ, ಇಲ್ಲೂ ಸಹ ಗೋ ಬ್ಯಾಕ್ ಸನ್ನಿವೇಶ ಶೋಭಾ ಕರಂದ್ಲಾಜೆ ಅವರಿಗೆ ಎದುರಾಗಿತ್ತು. ಆದರೂ, ಛಲಬಿಡದೇ ಅವರು ಚುನಾವಣಾ ಅಖಾಡದಲ್ಲಿ ಮುಂದುವರಿದಿದ್ದಾರೆ. ಹಿಂದೆ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾರಣ ಕರಂದ್ಲಾಜೆ ಅವರಿಗೆ ಮತದಾರರನ್ನು ಸೆಳೆಯುವ ವಿಶ್ವಾಸವಿದೆ. ಜೊತೆಗೆ ಮೋದಿ ಅಲೆ ಇರುವುದರಿಂದ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಮೋದಿ ಪರವಾದ ಅಲೆ, ಅಭಿವೃದ್ಧಿಯಲ್ಲಾದ ಸಾಧನೆ ನೋಡಬಹುದು. ಮತ್ತೆ ಅಧಿಕಾರಕ್ಕೆ ಬರುವ ಪಕ್ಷ ಎಂದು ಜನಸಾಮಾನ್ಯರಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಕಾರ್ಯಕರ್ತರ ಜತೆ ನಿಕಟ ಸಂಪರ್ಕ, ಸಂಘಟನಾ ಬಲ ಶೋಭಾ ಕರಂದ್ಲಾಜೆ ಅವರಿಗಿದೆ. ಅದೇ ರೀತಿ ನೆಗೆಟಿವ್ ಸಹ ಇದೆ. ಮುಖಂಡರ ಅಂತ ಕಲಹ, ಬಣಗಾರಿಕೆ, ಕಾರ್ಯಕರ್ತರಲ್ಲಿ ಉಂಟಾಗಿರುವ ನಿರುತ್ಸಾಹವೂ ಇದೆ. ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಎಸ್.ಟಿ. ಸೋಮಶೇಖರ್ ಅವರಿಂದ ಒಳ ಏಟಿನ ಆತಂಕವೂ ಇದೆ. ಇನ್ನು ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಗಾಗಿ ಸಮರ್ಥ ಅಭ್ಯರ್ಥಿಗಳಿಗಾಗಿ ಹುಡುಕಾಡಿದ್ದು, ವಿಪರ್ಯಾಸ. ಅಳೆದೂ ತೂಗಿ, ತೀವ್ರ ಕಸರತ್ತು ನಡೆಸಿ ಪ್ರೊ. ಎಂ.ವಿ.ರಾಜೀವ್ ಗೌಡ ಅವರನ್ನು ಕಣಕ್ಕೆ ಇಳಿಸಿದೆ. ಆದರೆ, ಕ್ಷೇತ್ರದ ಶಾಸಕರು, ಒಂದಿಷ್ಟು ಮತ ಸೆಳೆದು ತರಬಲ್ಲ ಮುಖಂಡರ ಜತೆಗೆ ಹೆಚ್ಚಿನ ಸಂಪರ್ಕವಿಲ್ಲ ಎಂಬ ಅಪಸ್ವರ ಪಕ್ಷದೊಳಗೆ ಹರಿದಾಡುತ್ತಿದೆ.
ಗೆಲುವಿಗಾಗಿ ಕಾಂಗ್ರೆಸ್ ತೀವ್ರ ಕಸರತ್ತು; ಸ್ವಾತಂತ್ರ್ಯ ಹೋರಾಟಗಾರರ ಮನೆತನ, ಪ್ರತಿಷ್ಠಿತ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ ಅನುಭವ ರಾಜೀವ್ ಗೌಡರಿಗೆ ಇದೆ. ಲೋಕಸಭೆ ಚುನಾವಣೆಯಲ್ಲಿ ಅದೆಷ್ಟರ ಮಟ್ಟಿಗೆ ಫಲ ಕೊಡುತ್ತದೆಯೋ ತಿಳಿಯದು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದರ ಜೊತೆಗೆ ಗ್ಯಾರಂಟಿ ಪ್ರಭಾವ ಮತದಾರರ ಮೇಲೆ ಬೀರಿದೆ. ಸಜ್ಜನರಾಗಿರುವ ರಾಜೀವ್ ಗೌಡ ಅವರು, ದೂರದೃಷ್ಟಿವುಳ್ಳವರು ಎಂಬ ಅಭಿಪ್ರಾಯವಿದೆ. ಸ್ಥಳೀಯರಾಗಿದ್ದರೂ ಮತದಾರರಿಗೆ ಅಭ್ಯರ್ಥಿಯ ಪರಿಚಯ ಇಲ್ಲದಿರುವುದು, ಹೈಪ್ರೊಫೈಲ್ ರಾಜಕಾರಣೆಯಾಗಿರುವ ಜನಸಾಮಾನ್ಯರಿಗೆ ಸಿಗುವುದಿಲ್ಲವೆಂಬ ಅಳುಕು ಸಹ ಇದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರೊ. ರಾಜೀವ್ ಗೌಡ ಅವರು ಅಪಾರ್ಟ್ಮೆಂಟ್ ಸಂಘಗಳನ್ನು ಓಲೈಸಿ ಕಾಂಗ್ರೆಸ್ ಗೆ ಒಂದಷ್ಟು ಮತಗಳನ್ನು ಸೆಳೆದಿದ್ದರು. ಈಗ ಹೋಟೆಲ್, ಪಾರ್ಕ್ ಹಾಗೂ ಅಪಾರ್ಟ್ ಮೆಂಟ್ಗಳನ್ನು ಟಾರ್ಗೆಟ್ ಮಾಡಿಕೊಂಡಿರುವ ಅವರು, ಕ್ಷೇತ್ರದ ಮಗ ನನಗೆ ಒಂದು ಅವಕಾಶ ಕೊಡಿ ಎಂದು ಪ್ರತಿಪಾದಿಸುತ್ತಿದ್ದಾರೆ.
ವಿಜಯದ ಓಟ ಮುಂದುವರಿಸಲು ಕೇಸರಿ ಪಡೆ ಹೋರಾಟ: ಇನ್ನು ಶೋಭಾ ಕರಂದ್ಲಾಜೆ ಅವರು ಗಾರ್ಮೆಂಟ್ಸ್, ಕಾರ್ಖಾನೆಗಳು, ಪಾರ್ಕ್ಗಳಿಗೆ ಭೇಟಿ ನೀಡಿ ಮತದಾರರನ್ನು ಸೆಳೆಯುತ್ತಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವೂ ಬಹುಪಾಲು ನಗರ ಹಾಗೂ ಒಂದಿಷ್ಟು ಗ್ರಾಮೀಣ ಸೊಗಡಿನ ಹಲವು ವಿಶೇಷತೆಗಳನ್ನು ಹೊಂದಿದೆ. ರಾಜ್ಯದ ವಿವಿಧ ಭಾಗಗಳು ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳಿಂದ ಬಂದ ಜನರು ಬದುಕು ಕಟ್ಟಿಕೊಂಡಿರುವ ಪ್ರದೇಶ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ. ಈ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಕೆ.ಆರ್. ಪುರಂ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಕೇಶಿನಗರ (ಮೀಸಲು) ಕ್ಷೇತ್ರವನ್ನು ಒಳಗೊಂಡಿದೆ.
8 ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ, 3 ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬಿಜೆಪಿಗೆ ಒಂದು ಕ್ಷೇತ್ರದಲ್ಲಿ ಒಳ ಪೆಟ್ಟು ಬೀಳುವುದು ನಿಶ್ಚಿತ. ಹಾಗಾಗಿ, ಈ ಬಾರಿಯ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ನೇರ ಹಣಾಹಣಿ ಏರ್ಪಟ್ಟಿದೆ. ಇಲ್ಲಿ ಬಿಜೆಪಿಗೆ ಮೋದಿ ಅಲೆ ವರ್ಕೌಟ್ ಆಗುತ್ತದೋ ಅಥವಾ ಕಾಂಗ್ರೆಸ್ಗೆ ಗ್ಯಾರಂಟಿ ಕೈ ಹಿಡಿಯುತ್ತದೆಯೋ ಎಂಬುದು ಚುನಾವಣಾ ಫಲಿತಾಂಶದ ನಂತರ ಗೊತ್ತಾಗಲಿದೆ.