ಬೆಂಗಳೂರು : ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಕಳ್ಳತನ ಎಸಗಿದ್ದ ಕುಖ್ಯಾತ ರೌಡಿ ಆಸಾಮಿ ಮತ್ತು ಆತನ ಸಹಚರರ ಸಹಿತ ನಾಲ್ವರು ಆರೋಪಿಗಳನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಣಿ ಅಲಿಯಾಸ್ ಕಳ್ಳ ಮಣಿ, ದೀಕ್ಷಿತ್, ಕೀರ್ತಿ ಹಾಗೂ ಅಜಯ್ ಅಲಿಯಾಸ್ ಕ್ಯಾಟು ಬಂಧಿತ ಆರೋಪಿಗಳು. ಬಂಧಿತರಿಂದ 28.50 ಲಕ್ಷ ಮೌಲ್ಯದ 470 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಡವೆಗಳು ಹಾಗೂ 50 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಮಾರ್ಚ್ 27 ರಂದು ರಾತ್ರಿ ರಾಜಗೋಪಾಲನಗರ ಠಾಣಾ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಆರೋಪಿಗಳಿಬ್ಬರು ಲಗ್ಗೆರೆ ಮುಖ್ಯರಸ್ತೆಯ ಜ್ಯೂವೆಲ್ಲರಿ ಅಂಗಡಿಯೊಂದರ ಮುಂಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅನುಮಾನಗೊಂಡು ಆರೋಪಿಗಳಿಬ್ಬರನ್ನೂ ವಿಚಾರಣೆಗೆ ಒಳಪಡಿಸಿದಾಗ ಒಬ್ಬನ ಪ್ಯಾಂಟ್ ಜೇಬಿನಲ್ಲಿ ಒಂದು ಜೊತೆ ಬೆಳ್ಳಿಯ ಕಾಲುಚೈನ್ ಹಾಗೂ ಮತ್ತೊಬ್ಬನ ಜೇಬಿನಲ್ಲಿ ಬೆಳ್ಳಿಯ ಉಡುದಾರ ಪತ್ತೆಯಾಗಿತ್ತು.
ಆರೋಪಿಗಳು ಸಮಂಜಸವಾದ ಉತ್ತರ ನೀಡದ ಕಾರಣ ಇಬ್ಬರನ್ನೂ ಠಾಣೆಗೆ ಕರೆತಂದು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು 10 ದಿನಗಳ ಪೊಲೀಸ್ ವಶಕ್ಕೆ ಪಡೆದಿದ್ದರು. ಹೆಚ್ಚಿನ ವಿಚಾರಣೆ ಕೈಗೊಂಡಾಗ ಆರೋಪಿಗಳು, ಮತ್ತಿಬ್ಬರು ಸಹಚರರ ಕುರಿತು ಬಾಯ್ಬಿಟ್ಟಿದ್ದರು. ಬಳಿಕ ಒಟ್ಟು ನಾಲ್ವರನ್ನೂ ವಶಕ್ಕೆ ಪಡೆದು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಉತ್ತರಹಳ್ಳಿ ಬಿಹೆಚ್ಸಿಎಸ್ ಲೇಔಟ್ ನಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಚಿನ್ನ-ಬೆಳ್ಳಿ ಒಡವೆಗಳು ಹಾಗೂ ಹಣವನ್ನು ಕಳವು ಮಾಡಿರುವುದು ಬಯಲಾಗಿದೆ.
ತನಿಖೆ ಮುಂದುವರೆಸಿದ ಪೊಲೀಸರು ಆರೋಪಿಗಳಿಂದ 470 ಗ್ರಾಂ ಚಿನ್ನಾಭರಣಗಳು, 500ಗ್ರಾಂ ಬೆಳ್ಳಿ ಪದಾರ್ಥಗಳು ಹಾಗೂ 50 ಸಾವಿರ ನಗದು ಮತ್ತು ಕೃತ್ಯಕ್ಕೆ ಬಳಸಿದ್ದ 1 ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಬಿಹೆಚ್ಸಿಎಸ್ ಲೇಔಟ್ ಮನೆಯಲ್ಲಿ ನಡೆದಿದ್ದ ಕಳ್ಳತನದ ಬಗ್ಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ಪ್ರಕರಣದಲ್ಲಿ ಸುಬ್ರಮಣ್ಯಪುರ ಪೊಲೀಸ್ ಠಾಣಾ ಸಿಬ್ಬಂದಿ ಓರ್ವನನ್ನು ಬಂಧಿಸಿದ್ದರು. ಆರೋಪಿಯು ಜಾಮೀನಿನ ಮೇಲೆ ಹೊರಬಂದಿದ್ದು, ಆತನ ಪತ್ತೆ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜಯನಗರ ಪೊಲೀಸರಿಂದ ಮನೆಗಳ್ಳರ ಬಂಧನ : ಮೂವರು ಮನೆಗಳ್ಳರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ನರಸಿಂಹರೆಡ್ಡಿ, ಕಾರ್ತಿಕ್ ಹಾಗೂ ನರಸಿಂಹ ಬಂಧಿತ ಆರೋಪಿಗಳು. ಮಾರ್ಚ್ 30ರಂದು ಸಂಜಯನಗರ ವ್ಯಾಪ್ತಿಯ ಡಾಲರ್ಸ್ ಕಾಲೋನಿಯ 3ನೇ ಮುಖ್ಯರಸ್ತೆಯ ಬಾಗಿಲಿನ ಲಾಕ್ ಒಡೆದಿದ್ದ ಆರೋಪಿಗಳು ಅಲ್ಮೇರಾದಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದರು.
ಕಳವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಏಪ್ರಿಲ್ 5ರಂದು ನೆಲಮಂಗಲದ ಗುಡೇಮಾರನಹಳ್ಳಿ ಬಳಿ ಮೂವರೂ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ 10 ಲಕ್ಷ ರೂಪಾಯಿ ಬೆಲೆ ಬಾಳುವ 151 ಗ್ರಾಂ ಚಿನ್ನಾಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರಲ್ಲಿ ಓರ್ವ ಆರೋಪಿಯು ಗಿರಿನಗರ ಪೊಲೀಸ್ ಠಾಣೆಯ ರೌಡಿ ಆಸಾಮಿಯಾಗಿದ್ದು, 2012 ನೇ ಸಾಲಿನಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಈ ಹಿಂದೆ ವಿಜಯನಗರ, ಬ್ಯಾಟರಾಯನಪುರ, ಗಿರಿನಗರ, ರಾಜರಾಜೇಶ್ವರಿನಗರ, ಸಿ.ಕೆ. ಅಚ್ಚುಕಟ್ಟು, ಕೆಂಗೇರಿ, ಸುಬ್ರಮಣ್ಯಪುರ, ಮೈಕೋಲೇಔಟ್, ಬನಶಂಕರಿ ಪೊಲೀಸ್ ಠಾಣೆಗಳಲ್ಲಿ ಕೊಲೆ, ದರೋಡೆಗೆ ಸಂಚು, ಕೊಲೆ ಯತ್ನ, ದೊಂಬಿ, ಸುಲಿಗೆ, ಹಗಲು & ರಾತ್ರಿ ಕನ್ನಾ ಕಳವು, ಕೊಲೆ ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದು, ಈತನ ವಿರುದ್ಧ ಒಟ್ಟು 36 ಪ್ರಕರಣಗಳು ದಾಖಲಾಗಿವೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ : ಬೆಂಗಳೂರು: ವಿಮಾನದಲ್ಲಿ ಬಂದು ಪಿಜಿಗಳಲ್ಲಿ ಲ್ಯಾಪ್ಟಾಪ್ ಎಗರಿಸುತ್ತಿದ್ದ ಬಿ.ಟೆಕ್ ಪದವೀಧರೆ ಸೆರೆ - B Tech graduate arrested