ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿನ ಬ್ರಾಹ್ಮಣ, ಬಲಿಜ, ರಜಪೂತ, ಜೈನ, ಆರ್ಯವೈಶ್ಯರು, ಲಿಂಗಾಯತರು, ಮೊದಲಿಯರ್ ಸೇರಿದಂತೆ ಕಡಿಮೆ ಮತದಾರರಿರುವ 15 ಸಣ್ಣ ಸಮುದಾಯಗಳ ಮತಗಳ ಮೇಲೆ ಜೆಡಿಎಸ್ ಕಣ್ಣು ನೆಟ್ಟಿದ್ದು, ಆ ಸಮುದಾಯಗಳ ಮತ ಸೆಳೆಯಲು ಮುಂದಾಗಿದೆ.
ಬೊಂಬೆನಗರಿ ಚನ್ನಪಟ್ಟಣ ನಗರದ ಕೋಟೆಯಲ್ಲಿರುವ ಬ್ರಾಹ್ಮಣ ಮಹಾಸಭಾದ ಕಚೇರಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಸಣ್ಣ ಸಮುದಾಯಗಳ ಮುಖಂಡರು, ಕಾಂಗ್ರೆಸ್ ಅವಧಿಯಲ್ಲಿ ನಮಗೆ ಯಾವುದೇ ಅನುಕೂಲವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಘೋಷಿಸಿದರು.
ಈ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, "ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತಿರುವ ಬ್ರಾಹ್ಮಣ, ಬಲಿಜ, ರಜಪೂತ ಸೇರಿದಂತೆ ಸುಮಾರು 15 ಸಣ್ಣ ಸಮುದಾಯಗಳು ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸಲು ನಿರ್ಧರಿಸಿವೆ" ಎಂದು ತಿಳಿಸಿದರು.
"ಈ ಚುನಾವಣೆಯಲ್ಲಿ ಪ್ರತಿ ಒಂದು ಮತ ಸಹ ಮುಖ್ಯವಾಗಿದೆ. ಇನ್ನು ಮೂರು ದಿನ ಮಾತ್ರ ಚುನಾವಣೆ ಬಾಕಿ ಇದೆ. ಚನ್ನಪಟ್ಟಣವು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸಿದ ಕ್ಷೇತ್ರವಾಗಿದೆ. ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಇನ್ನಿಲದ ಕಸರತ್ತು ನಡೆಸಿದೆ. ಜನರಿಗೆ ಗ್ಯಾರೆಂಟಿ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಚುನಾವಣೆ ಸಮಯದಲ್ಲಿ 2 ಸಾವಿರ ಬಿಡುಗಡೆ ಮಾಡುವ ಪ್ರವೃತಿಯನ್ನು ಕಾಂಗ್ರೆಸ್ ಮುಂದುವರಿಸಿದೆ. ರಾಜಕೀಯಕ್ಕಾಗಿ ಈ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಅದನ್ನು ಸರಿಯಾಗಿ ತಲುಪಿಸುತ್ತಿಲ್ಲ. ಬೇರೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸರ್ಕಾರ ದಿವಾಳಿಯಾಗಿದೆ. ಸರ್ಕಾರ ಅಭಿವೃದ್ಧಿ ಯೋಜನೆಗೆ ಅನುದಾನವನ್ನೇ ನೀಡುತ್ತಿಲ್ಲ. ಇದರಿಂದ ಕಾಂಗ್ರೆಸ್ ಶಾಸಕರೇ ಬೇಸತ್ತಿದ್ದಾರೆ" ಎಂದು ಆರೋಪಿಸಿದರು.
ಇದೇ ವೇಳೆ ಬ್ರಾಹ್ಮಣ ರಾಜಕೀಯ ವೇದಿಕೆ ರಾಜ್ಯಾಧ್ಯಕ್ಷ ರಾಘವೇಂದ್ರ ಮಯ್ಯ ಮಾತನಾಡಿ, "ಕ್ಷೇತ್ರದಲ್ಲಿ 500 ರಿಂದ 2 ಸಾವಿರ ಮತಗಳನ್ನು ಹೊಂದಿರುವ ಸಣ್ಣ ಸಮುದಾಯಗಳು ಸುಮಾರು 15ಕ್ಕೂ ಹೆಚ್ಚಿವೆ. ಈ ಸಮುದಾಯಗಳ ಮತ 15 ಸಾವಿರಕ್ಕೂ ಹೆಚ್ಚಿದೆ. ಕಾಂಗ್ರೆಸ್ ಸರ್ಕಾರ ಈ ಸಮುದಾಯಗಳನ್ನು ನಿರ್ಲಕ್ಷಿಸಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎಗೆ ನಮ್ಮ ಸಮುದಾಯಗಳು ಬೆಂಬಲ ಸೂಚಿಸಲು ನಿರ್ಧರಿಸಿವೆ" ಎಂದರು.
"ನಮ್ಮ ಜನಾಂಗ ಸೇರಿದಂತೆ ಇತರೆ ಯಾವುದೇ ಸಣ್ಣ ಸಮುದಾಯದವರಿಗೂ ಸರ್ಕಾರದಿಂದ ಇಲ್ಲಿಯವರೆಗೂ ಯಾವುದೇ ಅನುದಾನಗಳು ಬಂದಿಲ್ಲ. ಕಾಂಗ್ರೆಸ್ ಸರ್ಕಾರ ನಮ್ಮ ಸಣ್ಣ ಸಮುದಾಯಗನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಸಮುದಾಯಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈಗಾಗಿ ಈ ಬಾರಿ ನಿಖಿಲ್ ಕುಮಾರಸ್ವಾಮಿ ಅವರಿಗೆ ನಮ್ಮ ಎಲ್ಲಾ ಸಮುದಾಯದ ಬೆಂಬಲ ಇರಲಿದೆ" ಎಂದು ತಿಳಿಸಿದರು.
ಈ ವೇಳೆ ರಜಪೂತ ಸಮುದಾಯದ ಮುಖಂಡ ಲಕ್ಷ್ಮಣ ಸಿಂಗ್, ಗಜೇಂದ್ರ ಸಿಂಗ್, ಬಲಿಜ ಸಮಾಜದ ಮುಖಂಡ ಕಿಶೋರ್, ಜಟ್ಟಿಗರ ಸಮಾಜದ ಯುವ ಮುಖಂಡ ವಿಧ್ಯಾದರ ಜಟ್ಟಿ, ಬ್ರಾಹ್ಮಣ ಸಮುದಾಯದ ಮುಖಂಡ ಮಧು ಹೆಗಡೆ ಇದ್ದರು.
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಉಭಯ ಅಭ್ಯರ್ಥಿಗಳಿಂದ ಭರ್ಜರಿ ಪ್ರಚಾರ: ಮಾಧ್ಯಮದವರ ಮುಂದೆ ಆಡಿಯೋ ಬಿಡುಗಡೆ ಮಾಡಿದ ಕುಮಾರಸ್ವಾಮಿ