ಕಾನ್ಪುರ: ಇಲ್ಲಿನ ಪ್ರತಿಷ್ಟಿತ ಕೋಚಿಂಗ್ ಕೇಂದ್ರದಲ್ಲಿ ನೀಟ್(NEET) ವೈದ್ಯಕೀಯ ಪರೀಕ್ಷೆಯ ತಯಾರಿಗಾಗಿ ಆಗಮಿಸಿದ್ದ ಫತೇಪುರದ ಅಪ್ರಾಪ್ತ ಬಾಲಕಿಯನ್ನು 6 ತಿಂಗಳ ಕಾಲ ಒತ್ತೆಯಾಳಾಗಿರಿಸಿ ಕೋಚಿಂಗ್ ಸಂಸ್ಥೆಯ ಇಬ್ಬರು ದುರುಳ ಶಿಕ್ಷಕರು ಅತ್ಯಾಚಾರ ಎಸಗಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕರಾದ ಸಾಹಿಲ್ ಸಿದ್ದಿಕಿ (ಜೀವಶಾಸ್ತ್ರ ಶಿಕ್ಷಕ) ಮತ್ತು ವಿಕಾಸ್ ಪಾಂಡೆ(ರಸಾಯನಶಾಸ್ತ್ರ) ಎಂಬಿಬ್ಬರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಅತ್ಯಾಚಾರ, ಅಕ್ರಮ ಬಂಧನದಲ್ಲಿ ಇರಿಸಿರುವುದು, ಕ್ರಿಮಿನಲ್ ಬೆದರಿಕೆ ಹಾಗು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಅತ್ಯಾಚಾರ ಎಸಗಿದ್ದ ಸಂದರ್ಭದಲ್ಲಿ ಸಂತ್ರಸ್ತ ಬಾಲಕಿಗೆ 17 ವರ್ಷ ಪ್ರಾಯ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ಪೂರ್ಣ ವಿವರ: ಉತ್ತರ ಪ್ರದೇಶದ ಫತೇಪುರದ ನಿವಾಸಿಯಾದ ಸಂತ್ರಸ್ತ ಬಾಲಕಿ ಪೊಲೀಸರಿಗೆ ನೀಡಿದ ದೂರಿನಂತೆ, "2022ರ ಡಿಸೆಂಬರ್ ತಿಂಗಳಲ್ಲಿ ನನ್ನನ್ನು ಶಿಕ್ಷಕ ಸಿದ್ದಿಕಿ ಕಲ್ಯಾಣ್‌ಪುರದ ಮಕ್ಡಿ ಖೇರಾ ಪ್ರದೇಶದಲ್ಲಿರುವ ತನ್ನ ಗೆಳೆಯನ ಫ್ಲ್ಯಾಟ್‌ಗೆ ಹೊಸ ವರ್ಷದ ಪಾರ್ಟಿಗೆ ಆಹ್ವಾನಿಸಿದ್ದರು. ಕೋಚಿಂಗ್ ಕೇಂದ್ರದ ಇತರೆ ವಿದ್ಯಾರ್ಥಿಗಳೂ ಪಾರ್ಟಿಗೆ ಬರುತ್ತಿರುವುದಾಗಿ ಅವರು ನನಗೆ ತಿಳಿಸಿದ್ದರು. ಇದನ್ನು ನಂಬಿ ನಾನು ಅವರ ಫ್ಲಾಟ್‌ಗೆ ಹೋದೆ. ಆದರೆ ಅಲ್ಲಿ ಸಿದ್ದಿಕಿ ಹೊರತುಪಡಿಸಿ ಬೇರಾವುದೇ ವಿದ್ಯಾರ್ಥಿಗಳು ಇರಲಿಲ್ಲ. ಈ ವೇಳೆ ಬಲವಂತಪಡಿಸಿ ನನಗೆ ಕುಡಿಯಲು ಸಾಫ್ಟ್ ಡ್ರಿಂಕ್ ಕೊಟ್ಟರು. ನಂತರ ಪ್ರಜ್ಞೆ ಕಳೆದುಕೊಂಡೆ. ಇದಾದ ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿದರು. ಘಟನೆಯ ವಿಡಿಯೋ ಕೂಡಾ ಮಾಡಿದ್ದಾರೆ. ಇದಾಗಿ ಆರು ತಿಂಗಳ ಕಾಲ ನನ್ನನ್ನು ಅವರ ಫ್ಲಾಟ್‌ನಲ್ಲಿಯೇ ಇರಿಸಿಕೊಂಡರು. ಈ ಸಂದರ್ಭದಲ್ಲಿ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದರು. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಶೇರ್ ಮಾಡುವುದಾಗಿ ಬೆದರಿಕೆ ಹಾಕಿದರು. ಘಟನೆಯ ಕುರಿತು ಪೊಲೀಸರ ಸಹಾಯ ಪಡೆಯಲು ನನಗೆ ಧೈರ್ಯ ಇರಲಿಲ್ಲ. ಒಂದು ವೇಳೆ ದೂರು ನೀಡಿದರೆ ನನ್ನ ಕುಟುಂಬಕ್ಕೆ ತೊಂದರೆಯಾಗಬಹುದು ಎಂಬ ಭಯವಿತ್ತು. ಆದರೆ ಸಿದ್ದಿಕಿ, ಕೋಚಿಂಗ್ ಕೇಂದ್ರದ ಮತ್ತೋರ್ವ ಹುಡುಗಿಯನ್ನು ಕೂಡಾ ಇದೇ ರೀತಿ ಲೈಂಗಿಕ ದೌರ್ಜನ್ಯಕ್ಕೀಡು ಮಾಡಿದ ವಿಡಿಯೋ ನೋಡಿದ ನಾನು ಮನಸ್ಸು ಗಟ್ಟಿ ಮಾಡಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದೆ" ಎಂದು ಬಾಲಕಿ ವಿವರಿಸಿದ್ದಾಳೆ.
ಬಾಲಕಿ ಕಲ್ಯಾಣಪುರ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ ಎಂದು ಕಲ್ಯಾಣಪುರದ ಸಹಾಯಕ ಪೊಲೀಸ್ ಆಯುಕ್ತ ಅಭಿಷೇಕ್ ಪಾಂಡೆ ತಿಳಿಸಿದರು.
ಕೆಲ ತಿಂಗಳ ಹಿಂದೆ, ಇದೇ ಸಿದ್ದಿಕಿ, ಕೋಚಿಂಗ್ ಕೇಂದ್ರದಲ್ಲಿ ಇನ್ನೊಬ್ಬ ವಿದ್ಯಾರ್ಥಿನಿ ಜೊತೆಗೂ ಅಶ್ಲೀಲ ಕೃತ್ಯದಲ್ಲಿ ತೊಡಗಿ ಅರೆಸ್ಟ್ ಆಗಿದ್ದ. ಇತ್ತೀಚಿಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ಇಬ್ಬರು ಶಿಕ್ಷಕರ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಡಿದ್ದಾರೆ.
ಇದನ್ನೂ ಓದಿ: ನಾಯಿ ಮರಿಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಹಿಳೆಯರು: ಪ್ರಕರಣ ದಾಖಲು