ಬೆಳಗಾವಿ: ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 23ನೇ ವಾರ್ಷಿಕ ಘಟಿಕೋತ್ಸವದ ಭಾಗ-2ರಲ್ಲಿ ಒಬ್ಬ ವಿದ್ಯಾರ್ಥಿನಿಗೆ 4, ಇಬ್ಬರಿಗೆ ತಲಾ 3 ಮತ್ತು ಮೂವರಿಗೆ ತಲಾ 2 ಚಿನ್ನದ ಪದಕ ಪ್ರದಾನ ಮಾಡಲಾಯಿತು. ಜೊತೆಗೆ 4,514 ಎಂಬಿಎ, 4,024 ಎಂಸಿಎ, 920 ಎಂ.ಟೆಕ್, 44 ಎಂ.ಆರ್ಚ್, 27 ಎಂ.ಪ್ಲ್ಯಾನ್ ಪದವಿ, ಪಿಎಚ್.ಡಿ–667, ಎಂ.ಎಸ್ಸಿ ಎಂಜಿನಿಯರಿಂಗ್ ಬೈ ರಿಸರ್ಚ್–2, ಇಂಟಿಗ್ರೇಟೆಡ್ ಡ್ಯುಯೆಲ್ ಡಿಗ್ರಿ ಟು ರಿಸರ್ಚ್–2 ಸಂಶೋಧನಾ ಪದವಿಗಳನ್ನು ಪ್ರದಾನ ಮಾಡಲಾಯಿತು.
ಬೆಂಗಳೂರಿನ ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗದ ವಿದ್ಯಾರ್ಥಿನಿ ತನು ಜೆ. 4 ಚಿನ್ನದ ಪದಕ ಗಳಿಸಿದ್ದಾರೆ. ಹುಬ್ಬಳ್ಳಿಯ ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಕ್ಷತಾ ನಾಯ್ಕ ಮತ್ತು ದಾವಣಗೆರೆಯ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಎಂ.ಪೂಜಾ ತಲಾ 3 ಚಿನ್ನದ ಪದಕ, ಬೆಳಗಾವಿಯ ಎಸ್.ಜಿ.ಬಾಳೇಕುಂದ್ರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕ್ರಾಂತಿ ಮೋರೆ, ಚಿಕ್ಕಮಗಳೂರಿನ ಆದಿಚುಂಚನ ಗಿರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಚ್.ಪಿ.ಚೇತನ ಮತ್ತು ದಾವಣಗೆರೆಯ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಎ.ಎಸ್.ನಿತ್ಯಾ ತಲಾ 2 ಚಿನ್ನದ ಪದಕ ಗಳಿಸಿದ್ದಾರೆ.
ಹೋಟೆಲ್ ಮಾಲೀಕನ ಮಗಳಿಗೆ ನಾಲ್ಕು ಚಿನ್ನದ ಪದಕ: ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಸಣ್ಣ ಹೋಟೆಲ್ ನಡೆಸುತ್ತಿರುವ ಪಿ.ಗೋಪಿ, ಎನ್. ಮಂಗಳಾ ದಂಪತಿ ಪುತ್ರಿ ತನು ಜಿ. ನಾಲ್ಕು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಮಾಧ್ಯಮಗಳ ಜೊತೆಗೆ ಸಂತಸ ವ್ಯಕ್ತಪಡಿಸಿದ ತನು ಜಿ. ನನ್ನ ತಂದೆ ಆರನೇ ತರಗತಿ ಓದಿದ್ದು. ತಾಯಿ 10ನೇ ತರಗತಿ ಓದಿದ್ದಾರೆ. ಕಷ್ಟದಿಂದ ನನಗೆ ಓದಿಸುತ್ತಿದ್ದರು. ಹಾಗಾಗಿ, ತಂದೆ - ತಾಯಿಗೆ ಒಳ್ಳೆಯ ಹೆಸರು ತರಬೇಕು ಅಂದುಕೊಂಡಿದ್ದೆ. 4 ಚಿನ್ನದ ಪದಕ ಬಂದಿರೋದು ತುಂಬಾ ಖುಷಿ ತಂದಿದೆ. ಈಗ ಬೆಂಗಳೂರಿನ ಕಂಪನಿಯೊಂದರಲ್ಲಿ ಸಂಶೋಧನಾ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಕೆಲಸ ಮಾಡುತ್ತಲೇ ಉನ್ನತ ವ್ಯಾಸಂಗ ಮಾಡಬೇಕು ಎಂದುಕೊಂಡಿದ್ದೇನೆ. ಈ ಚಿನ್ನದ ಪದಕಗಳನ್ನು ತಂದೆ -ತಾಯಿ ಮತ್ತು ಮಾರ್ಗದರ್ಶಕ ಮಂಜುನಾಥ ಅವರಿಗೆ ಅರ್ಪಿಸುತ್ತೇನೆ ಎಂದರು.
ಟೇಲರಿಂಗ್ ಉದ್ಯಮಿ ಪುತ್ರಿಗೆ ಮೂರು ಚಿನ್ನ: ಮುರಡೇಶ್ವರ ಮೂಲದ ಹುಬ್ಬಳ್ಳಿಯಲ್ಲಿಯೇ ನೆಲೆಸಿರುವ ಶ್ರೀಧರ ನಾಯ್ಕ ಮತ್ತು ರಾಜೇಶ್ವರಿ ದಂಪತಿಯ ಪುತ್ರಿ ಅಕ್ಷತಾ ನಾಯ್ಕ ಹುಬ್ಬಳ್ಳಿಯ ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಸಿಎ ವಿದ್ಯಾರ್ಥಿನಿಯಾಗಿದ್ದು, ಮೂರು ಚಿನ್ನದ ಪದಕ ಪಡೆದಿದ್ದಾರೆ. ಸದ್ಯ ಸಾಫ್ಟವೇರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಕಾಲೇಜಿಗೆ ಪ್ರಥಮ ಚಿನ್ನದ ಪದಕ ತಂದು ಕೊಟ್ಟಿರೋದು ತುಂಬಾ ಖುಷಿ ಆಗಿದ್ದು, ಇತಿಹಾಸ ದಾಖಲು ಮಾಡಿದ್ದೇನೆ. ಮುಂದೆ ಸರ್ಕಾರಿ ನೌಕರಿ ಹಿಡಿಯಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ ಎಂದು ಅಕ್ಷತಾ ನಾಯಕ ಅಭಿಪ್ರಾಯ ಪಟ್ಟರು.
ಸರ್ಕಾರಿ ಕಾಲೇಜು ವಿದ್ಯಾರ್ಥಿನಿಗೆ ಮೂರು ಚಿನ್ನದ ಪದಕ: ದಾವಣಗೆರೆಯ ಸರ್ಕಾರಿ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಪೂಜಾ ಎಂ.ಎಂ.ಟೆಕ್‌ನಲ್ಲಿ ಮೂರು ಚಿನ್ನ ಪಡೆದು ಸಾಧನೆ ಮಾಡಿದ್ದಾರೆ. ತಂದೆ ಮಂಜುನಾಥ ಆಚಾರಿ ಎಸ್. ನಿವೃತ್ತ ಶಿಕ್ಷಕರಾಗಿದ್ದು, ತಾಯಿ ಅಂಬುಜಾಕ್ಷಿ ಕೆ.ವಿ. ಗೃಹಿಣಿ. ಮಾಧ್ಯಮಗಳೊಂದಿಗೆ ಮಾತನಾಡಿ ಹರ್ಷ ವ್ಯಕ್ತಪಡಿಸಿದ ಪೂಜಾ, ಬಿಇ ಹಾಗೂ ಎಂ.ಟೆಕ್ ಸರ್ಕಾರಿ ಕಾಲೇಜಿನಲ್ಲಿಯೇ ಓದಿದ್ದೇನೆ. ಸರ್ಕಾರಿ ಕಾಲೇಜಿನಲ್ಲಿ ಓದುವುದರಿಂದ ಸ್ವಂತ ಅಧ್ಯಯನ ಮಾಡಬಹುದು. ಅಲ್ಲದೇ ಆರ್ಥಿಕವಾಗಿ ಪೋಷಕರಿಗೆ ಹೊರೆ ಆಗೋದಿಲ್ಲ. ಮುಂದೆ ಪಿಎಚ್.ಡಿ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ ಎಂದರು.
ವಿಜಯಪುರ ಬಿಎಲ್ ಡಿಇ ಕಾಲೇಜಿನ ಮಶಿನ್ ಡಿಸೈನ್ ಎಂಟೆಕ್ ವಿಭಾಗದಲ್ಲಿ ವರ್ಷಾ ಜಾಧವ 1 ಚಿನ್ನದ ಪದಕ ಪಡೆದಿದ್ದಾರೆ. ತಂದೆ ಉತ್ತಮ ಜಾಧವ ಕಾಲೇಜು ಉಪನ್ಯಾಸಕರಿದ್ದು, ತಾಯಿ ಲಕ್ಷ್ಮೀ ಸಿಡಿಪಿಒ ಪುತ್ರಿ ವರ್ಷಾ. ನನಗೆ ತಂದೆ-ತಾಯಿ ಮತ್ತು ಶಿಕ್ಷಕರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಪ್ರಯತ್ನ ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಮುಂದೆ ಐಎಎಸ್ ಮಾಡುವ ಕನಸು ಹೊಂದಿದ್ದೇನೆ ಎಂದರು.
ಏಕ ಭಾರತ, ಶ್ರೇಷ್ಠ ಭಾರತ ಹಾಗೂ ವಿಕಸಿತ ಭಾರತ ನಿರ್ಮಾಣದಲ್ಲಿ ವಿಜ್ಞಾನ ಮತ್ತು ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಶಿಕ್ಷಣ ಕಲಿತ ವಿದ್ಯಾರ್ಥಿಗಳು ದೇಶಕ್ಕೆ ಕೊಡುಗೆ ನೀಡಬೇಕು. ವಿಕಸಿತ ಭಾರತಕ್ಕೆ ವಿದ್ಯಾರ್ಥಿಗಳ ಕೊಡುಗೆ ಬಹಳಷ್ಟು ಅಗತ್ಯವಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೇಳಿದರು.
ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 23ನೇ ವಾರ್ಷಿಕ ಘಟಿಕೋತ್ಸವದ ಭಾಗ 2ರಲ್ಲಿ ಮಾತನಾಡಿದ ಅವರು, ದೇಶವನ್ನು ಆತ್ಮನಿರ್ಭರ ಹಾಗೂ ಸರ್ವಶ್ರೇಷ್ಠ ಮಾಡಲು ಇಂದಿನ ವಿದ್ಯಾರ್ಥಿಗಳ ಸಹಕಾರದ ಅವಶ್ಯಕತೆ ಇದೆ. ಔದ್ಯೋಗಿಕ ಕ್ಷೇತ್ರ ನಮ್ಮ ಕಲ್ಪನೆಗಿಂತಲೂ ಅತಿ ವೇಗವಾಗಿ ಬೆಳೆಯುತ್ತಿದೆ. ಇಂದಿನ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ ಸುಸ್ಥಿರ ದೇಶಕ್ಕಾಗಿ ನಿಮ್ಮ ಕೊಡುಗೆ ಬೇಕಿದೆ. ಮನುಷ್ಯ ವಿದ್ಯಾರ್ಥಿ ಜೀವನದಲ್ಲಿ ಕಲಿಯುವುದು ಮುಖ್ಯ, ಹೊಸದನ್ನು ಕಲಿಯುತ್ತ ಆಸಕ್ತಿ ತೋರಬೇಕು. ಸದಾ ಕಲಿಯುತ್ತಲೇ ಇರಬೇಕು. ದೇಶಕ್ಕಾಗಿ ಸಮರ್ಪಣಾ ಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸೆಲ್ಕೋ ಸಂಸ್ಥಾಪಕ ಡಾ.ಹರೀಶ ಮಾತನಾಡಿ, ಕಲಿಕೆಯ ಬಳಿಕ ವಿದ್ಯಾರ್ಥಿಗಳು ದೊಡ್ಡ ಸವಾಲು ಎದುರಿಸಬೇಕು. ಎಲ್ಲ ಕ್ಷೇತ್ರಗಳಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದೆ. ಪ್ರತಿಯೊಬ್ಬರು ತಮ್ಮ ಕಠಿಣ ಶ್ರಮ, ಸಾಕಷ್ಟು ಸವಾಲುಗಳನ್ನು ಎದುರಿಸಿಕೊಂಡು ಬೆಳೆಯುತ್ತಿದ್ದಾರೆ. ಸಂಶೋಧನೆಯನ್ನು ಆಳವಾಗಿ ನಡೆಸಬೇಕು. ತಮ್ಮ ಐದು ವರ್ಷಗಳ ಸಂಶೋಧನೆಯಲ್ಲಿ ಸಾಧನೆ, ಅವಿಷ್ಕಾರಗಳ ಕುರಿತು, ತಳಮಟ್ಟದಲ್ಲಿ ಸಂಶೋಧನೆ ಅವಶ್ಯಕತೆ ಇದೆ. ಅದರ ಸದ್ಬಳಕೆ ಆದರೆ ಮಾತ್ರ ಸಾರ್ಥಕ. 2027-28ರ ವೇಳೆಗೆ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಲು ಸಂಶೋಧನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷದಲ್ಲಿ ಎರಡು ಬಾರಿ ಘಟಿಕೋತ್ಸವ ನಡೆಸಲಾಗುತ್ತಿದೆ. ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಬಜೆಟ್ನಲ್ಲಿ 200 ಕೋಟಿ ರೂ. ಮೀಸಲಿಡಲಾಗಿದೆ. 600 ಕೌಶಲ್ಯಾಭಿವೃದ್ಧಿ ಕೇಂದ್ರ, ಕೋರ್ಸ್ಗಳನ್ನು ಆರಂಭಿಸಲಾಗುವುದು. ಎಲ್ಲ ಕ್ಷೇತ್ರಗಳಲ್ಲಿ ಸವಾಲುಗಳ ಜತೆಗೆ ಸ್ಪರ್ಧೆ ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಕುಲಪತಿ ಎಸ್.ವಿದ್ಯಾಶಂಕರ, ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್. ಶ್ರೀನಿವಾಸ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ: ಮೈಸೂರು ವಿವಿ ಘಟಿಕೋತ್ಸವ: ಎಂಎಸ್ಸಿಯಲ್ಲಿ ಮೇಘನಾಗೆ 15 ಗೋಲ್ಡ್ ಮೆಡಲ್, ಕನ್ನಡದಲ್ಲಿ ತೇಜಸ್ವಿನಿಗೆ 10 ಚಿನ್ನದ ಪದಕ