ಬೆಂಗಳೂರು: ಬೆಂಗಳೂರಿನಲ್ಲಿರುವ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಬಿಬಿಎಂಪಿಯಿಂದ ನೋಟಿಸ್ ಜಾರಿಯಾಗಿದೆ.
ಕ್ರಿಕೆಟರ್ ವಿರಾಟ್ ಕೊಹ್ಲಿ ಫ್ರಾಂಚೈಸ್ ಪಡೆದಿರುವ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಮುಂಭಾಗದ ಒನ್8 ಕಮ್ಯೂನ್ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಬಿಬಿಎಂಪಿ ಬಿಸಿ ಮುಟ್ಟಿಸಿದ್ದು, ಅಗ್ನಿಶಾಮಕ ದಳದಿಂದ ನಕ್ಷೆ, ಪ್ರಮಾಣ ಪತ್ರ, ಎನ್‌ಒಸಿ ಪರವಾನಗಿ ಪಡೆಯದೇ ಕಾನೂನು ಉಲ್ಲಂಘನೆ ಮಾಡಿದ್ದಕ್ಕೆ ನೋಟಿಸ್ ನೀಡಿದೆ.
ಸಾಮಾಜಿಕ ಕಾರ್ಯಕರ್ತ ಹೆಚ್.ಎಂ.ವೆಂಕಟೇಶ್ ಎನ್ನುವವರು ಈ ಬಗ್ಗೆ ಬಿಬಿಎಂಪಿಗೆ ದೂರು ಕೊಟ್ಟಿದ್ದು, ಇದನ್ನು ಆಧರಿಸಿ ಶಾಂತಿನಗರದ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈಗಾಗಲೇ ಒಂದು ಬಾರಿ ನೋಟಿಸ್ ನೀಡಿದ್ದರೂ, ಕೊಹ್ಲಿ ಮಾಲೀಕತ್ವದ ಬಾರ್ ಅಂಡ್ ರೆಸ್ಟೋರೆಂಟ್ನಿಂದ ಯಾವುದೇ ಪ್ರತಿಕ್ರಿಯೆ ನೀಡಲಾಗಿಲ್ಲ. ಹೀಗಾಗಿ ಮತ್ತೆ ನೋಟಿಸ್ ಜಾರಿ ಮಾಡಿ, ಲಿಖಿತ ಸಮಜಾಯಿಷಿಯನ್ನು ಕೇಳಲಾಗಿದೆ. ಉತ್ತರ ನೀಡದೇ ಇದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಜುಲೈ ತಿಂಗಳಿನಲ್ಲಿ ಇದೇ ಪಬ್ ವಿರುದ್ಧ ದಾಖಲಾಗಿತ್ತು ಎಫ್.ಐ.ಆರ್: ಜುಲೈ ತಿಂಗಳಿನಲ್ಲಿ ಅವಧಿ ಮೀರಿ ಗ್ರಾಹಕರಿಗೆ ಅನುವು ಮಾಡಿಕೊಡುತ್ತಿದ್ದ ಆರೋಪದಡಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಒನ್ 8 ಕಮ್ಯೂನ್ ರೆಸ್ಟೋರೆಂಟ್ ಸೇರಿದಂತೆ ಮೂರು ರೆಸ್ಟೋರೆಂಟ್ಗಳ ವ್ಯವಸ್ಥಾಪಕರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಸರ್ಕಾರ ನಿಗದಿಪಡಿಸಿರುವ ನಿಯಮಗಳನ್ನು ಮೀರಿ ಕಾರ್ಯ ನಿರ್ವಹಿಸುತ್ತಿರುವ ರೆಸ್ಟೋರೆಂಟ್, ಬಾರ್, ಪಬ್ ವಿರುದ್ಧ ಜುಲೈ 6ರಂದು ರಾತ್ರಿ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ, ಅವಧಿ ಮೀರಿದ ಬಳಿಕವೂ ಗ್ರಾಹಕರಿಗೆ ಅನುವು ಮಾಡಿಕೊಡುತ್ತಿದ್ದ ಆರೋಪದಡಿ ನಗರದ ಕಸ್ತೂರಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್, ಚರ್ಚ್ ಸ್ಟ್ರೀಟ್‌ನಲ್ಲಿರುವ ಎಂಪೈರ್ ರೆಸ್ಟೋರೆಂಟ್, ಬ್ರಿಗೇಡ್ ರಸ್ತೆಯಲ್ಲಿರುವ ಪಾಂಜಿಯೋ ಬಾರ್ ಆ್ಯಂಡ್ ರೆಸ್ಟೋರೆಂಟ್ ವ್ಯವಸ್ಥಾಪಕರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ನೀಡಿದ್ದ ನೀರಿನ ಬಿಲ್ ನೋಟಿಸ್ ವಾಪಸ್: ಸಚಿವ ಎಂ.ಬಿ.ಪಾಟೀಲ್