ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಟದ ಮೈದಾನದ ಗೇಟ್ ಗೇಟ್ ಗೇಟ್ ಬಿದ್ದು ಬಾಲಕ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ದತ್ತಾತ್ರೇಯ ವಾರ್ಡ್ನ ಸಹಾಯಕ ಅಭಿಯಂತರರನ್ನು ಅಮಾನತು ಮಾಡಿ ಬಿಬಿಎಂಪಿ ಆದೇಶಿಸಿದೆ.
ಸಹಾಯಕ ಅಭಿಯಂತರ ಟಿ.ಶ್ರೀನಿವಾಸ ರಾಜು ಎಂಬವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ತಕ್ಷಣ ಜಾರಿಗೆ ಬರುವಂತೆ ಪಾಲಿಕೆ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ, ಗೇಟ್‌ನ ಸಾಮರ್ಥ್ಯಕ್ಕೆ ತಕ್ಕಂತೆ ಕೀಲುಗಳನ್ನು ಅಳವಡಿಸದಿರುವುದು ಹಾಗೂ ಸರಿಯಾದ ನಿರ್ವಹಣೆ ಮಾಡಿಲ್ಲ ಎಂಬ ಕಾರಣದಿಂದ ಅಮಾನತು ಮಾಡಿ ಆದೇಶ ನೀಡಲಾಗಿದೆ.
ಜೊತೆಗೆ, ಘಟನೆ ಬಗ್ಗೆ ವಿವರಣೆ ನೀಡುವಂತೆ ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್‌ಗೆ ಕೂಡ ನೋಟಿಸ್ ನೀಡಲಾಗಿದೆ. ಮೂರು ದಿನಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.
ಬಿಬಿಎಂಪಿ ಆಟದ ಮೈದಾನದ ಗೇಟ್ ಗೇಟ್ ಮೈಮೇಲೆ ಬಿದ್ದ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ಮಲ್ಲೇಶ್ವರಂ ಠಾಣೆ ವ್ಯಾಪ್ತಿಯ ರಾಜಶಂಕರ್ ಆಟದ ಮೈದಾನದಲ್ಲಿ ಭಾನುವಾರ ನಡೆದಿತ್ತು. ಘಟನೆಯಲ್ಲಿ 11 ವರ್ಷದ ನಿರಂಜನ್ ಎಂಬ ಬಾಲಕ ಮೃತಪಟ್ಟಿದ್ದ. ಕಬ್ಬಿಣದ ಗೇಟ್ ಮೈಮೇಲೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ಬಾಲಕ ಅಸುನೀಗಿದ್ದ.