ಮಂಗಳೂರು: ''ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪ ಮಾಡಿರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನನಗೆ 150 ಕೋಟಿ ರೂ. ಆಫರ್ ಮಾಡಿರಲಿಲ್ಲ. ಸಿದ್ದರಾಮಯ್ಯರಿಗೆ ಈ ಬಗ್ಗೆ ಮಾತನಾಡುವ ಹಕ್ಕಿಲ್ಲ'' ಎಂದು ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸ್ಫಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ''2012ರ ಮಾರ್ಚ್ನಲ್ಲಿ ವಕ್ಫ್ ಬೋರ್ಡ್ ಆಸ್ತಿ ಕಬಳಿಕೆ ಬಗ್ಗೆ ವರದಿ ನೀಡಿದ್ದು, ಇದರಲ್ಲಿ 2 ಲಕ್ಷ 30 ಸಾವಿರ ಕೋಟಿ ರೂ. ಹಗರಣ ಆಗಿರುವುದನ್ನು ತಿಳಿಸಿದ್ದೆ. ಆದರೆ ಇದರ ವಿಚಾರದಲ್ಲಿ ಬಿ.ವೈ.ವಿಜಯೇಂದ್ರ ಇರಲಿಲ್ಲ. ನಾನು ವರದಿಯನ್ನು ಅನುಷ್ಠಾನ ಮಾಡುವ ಬಗ್ಗೆ ತುಂಬಾ ಉತ್ಸುಕನಾಗಿದ್ದೆ. ಯಾರಾದರೂ ನನ್ನನ್ನು ಹಿಂದೆ ಸರಿಯುವಂತೆ ಮಾಡಿದರೆ, ನನಗೆ ಕೋಪ ಬರುತ್ತಿತ್ತು'' ಎಂದರು.
ವಿಜಯೇಂದ್ರಗೆ ನನ್ನ ಮನೆಯೂ ಗೊತ್ತಿಲ್ಲ: ''ವಿಜಯೇಂದ್ರ ನನ್ನ ಮನೆಗೆ ಬರಲೇ ಇಲ್ಲ, ನನ್ನ ಮನೆಯೂ ಅವರಿಗೆ ಗೊತ್ತಿಲ್ಲ. ನಮ್ಮ ಪಕ್ಷದ ಕಚೇರಿಗೆ ಬಂದಾಗ ವಿಜಯೇಂದ್ರ ಮತ್ತು ನಾನು ಮಾತನಾಡಿಕೊಂಡಿದ್ದೆವು. ನಿಮ್ಮದೇ ಸರ್ಕಾರ ಇರುವಾಗ ನಿಮ್ಮ ಅಪ್ಪಾಜಿ (ಯಡಿಯೂರಪ್ಪ) ಯಾಕೆ ಇದನ್ನು ಅನುಷ್ಠಾನ ಮಾಡಿಲ್ಲ ಎಂದು ನಾನು ಪ್ರಶ್ನಿಸಿದಾಗ ಅವರು ನೀವು ಈ ವಿಚಾರದಲ್ಲಿ ತುಂಬಾ ಹೋರಾಟ ಮಾಡಿದ್ದೀರಿ. ಈ ವಿಚಾರವನ್ನು ಕೈಬಿಡುವುದಾದರೆ ಬಿಡಿ ಎಂದು ಹೇಳಿದ್ದರು. ಆಗ ನಾನು ಅವರೊಂದಿಗೆ ಕೋಪದಲ್ಲಿ ಜೋರಾಗಿ ಮಾತಾಡಿದ್ದೆ. ಆದರೆ ಅವರು 150 ಕೋಟಿ ರೂ. ಆಫರ್ ಮಾಡಿಯೇ ಇಲ್ಲ'' ಎಂದು ಸ್ಟಷ್ಟನೆ ನೀಡಿದ್ದಾರೆ.
''2013ರಲ್ಲೇ ಕಾಂಗ್ರೆಸ್ನವರು ನಾನು ಕೇಳಿದಷ್ಟು ಹಣ ಕೊಡುವ ಸ್ಥಿತಿಯಲ್ಲಿದ್ದರು. ಇದು 2.3 ಲಕ್ಷ ಕೋಟಿ ರೂ. ಹಗರಣವಾಗಿತ್ತು. ಅದರಲ್ಲಿ ದೊಡ್ಡ ದೊಡ್ಡ ತಲೆಗಳೇ ಭಾಗಿಯಾಗಿದ್ದವು. ಅದಕ್ಕೆ ಎಲ್ಲ ಸಾಕ್ಷಿಗಳೂ ಇವೆ'' ಎಂದು ಆರೋಪಿಸಿದ್ದಾರೆ.
ಎಲ್ಲವೂ ವೋಟ್ ಬ್ಯಾಂಕ್ಗೋಸ್ಕರ: ''ಸಿದ್ದರಾಮಯ್ಯ ಅವರು 1 ಲಕ್ಷ 60 ಸಾವಿರ ಎಕರೆ ಜಮೀನಿಗೆ ಕಬಳಿಕೆ ಆಗಿದೆ ಎಂದು ಇತ್ತೀಚೆಗೆ ನೋಟಿಸ್ ಕೊಟ್ಟರು. ಆದರೆ ವಕ್ಫ್ ಆಸ್ತಿ ಇರುವುದು 54 ಸಾವಿರ ಎಕರೆ ಮಾತ್ರ. ಅದರಲ್ಲಿ 29 ಸಾವಿರ ಎಕರೆ ಮಾತ್ರ ಕಬಳಿಕೆ ಆಗಿದೆ. ಹೀಗಿರುವಾಗ 1 ಲಕ್ಷ 60 ಸಾವಿರ ಎಕರೆ ಜಮೀನಿಗೆ ನೋಟಿಸ್ ಯಾಕೆ ಕೊಟ್ಟರು. ಅವರ ಮೇಲಿನ ಪ್ರೀತಿಯಿಂದ ಕೊಟ್ಟಿರಬಹುದು. ಆದರೆ ಆ ಬಳಿಕ ನೋಟಿಸ್ ಹಿಂಪಡೆದಿದ್ದು ಯಾಕೆ? ವೋಟ್ ಬ್ಯಾಂಕ್ಗೋಸ್ಕರ ಹಾಗೂ ಗೊಂದಲ ಸೃಷ್ಟಿಸಲು ಹೀಗೆ ಮಾಡಿದ್ದಾರೆ'' ಎಂದು ಅನ್ವರ್ ಮಾಣಿಪ್ಪಾಡಿ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: '150 ಕೋಟಿ ರೂ ಆಫರ್ ಆರೋಪದಲ್ಲಿ ತರ್ಕವಿಲ್ಲ, ಕಾಂಗ್ರೆಸ್ ಪಕ್ಷವನ್ನು ನಾನೇಕೆ ಬಚಾವ್ ಮಾಡಲಿ?'
''ನಿಜವಾಗಿಯೂ ಸಿದ್ಧರಾಮಗೆ ಅಲ್ಪಸಂಖ್ಯಾತರ ಮೇಲೆ ಕನಿಕರ ಇದ್ದರೆ, ಪುರುಷತ್ವ, ಮನುಷ್ಯತ್ವ ಇದ್ದರೆ ನನ್ನ ವರದಿಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಲಿ. ಆಗ ನಿಮ್ಮ ನಾಯಕತ್ವವನ್ನು ಒಪ್ಪಿಕೊಳ್ಳುತ್ತೇನೆ'' ಎಂದು ಸವಾಲು ಹಾಕಿದ ಅನ್ವರ್ ಮಾಣಿಪ್ಪಾಡಿ , ''ಅವರಿಗೆ ಎಲ್ಲರೂ ಒಟ್ಟಾಗಿ ಇರಬೇಕೆಂಬ ಆಶಯ ಇಲ್ಲ'' ಎಂದರು.
ಆರೋಪವೇನು?: ವಕ್ಫ್ ಅಕ್ರಮ ಮುಚ್ಚಿ ಹಾಕಲು ಯಡಿಯೂರಪ್ಪ ತಮ್ಮ ಮಗನನ್ನು ಕಳಿಸಿ ಕೋಟ್ಯಂತರ ರೂಪಾಯಿ ಆಫರ್ ಮಾಡಿದ್ದರು ಎಂಬ ಬಿಜೆಪಿ ವಕ್ತಾರ ಅನ್ವರ್ ಮಾಣಿಪ್ಪಾಡಿ ಆರೋಪವನ್ನು ಸಚಿವ ಪ್ರಿಯಾಂಕ್ ಖರ್ಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಶುಕ್ರವಾರ ಪ್ರಸ್ತಾಪಿಸಿದ್ದರು. ಅಂದಿನ ಸಿಎಂ ಯಡಿಯೂರಪ್ಪ ಅವರು ವಿಜಯೇಂದ್ರರನ್ನು ಕಳಿಸಿ ನನಗೆ ಕೋಟ್ಯಂತರ ರೂಪಾಯಿ ಆಫರ್ ಮಾಡಿದ್ದರು. ನನ್ನ ಮನೆಗೆ ಗನ್ ಮ್ಯಾನ್ ಜೊತೆ ವಿಜಯೇಂದ್ರ ಬಂದು ವಕ್ಫ್ ಅಕ್ರಮ ಬಗ್ಗೆ ಮಾತಾಡದಂತೆ 150 ಕೋಟಿ ರೂ. ಆಫರ್ ಮಾಡಿದ್ದರು ಎಂದು ಮಾಣಿಪ್ಪಾಡಿ ಆರೋಪಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರಸ್ತಾಪ ಮಾಡಿದ್ದರು. ಈ ಕುರಿತು ಬಿಜೆಪಿಯ ಯಾವ ಸಿಎಂ ಸಹ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಈಗಿನ ಬಿಜೆಪಿ ರಾಜ್ಯಾಧ್ಯಕ್ಷರು ಯಾರ ಹಿತಾಸಕ್ತಿ ಕಾಪಾಡಲು ಮಾಣಿಪ್ಪಾಡಿಗೆ ಹಣದ ಆಮಿಷ ಕೊಡಲು ಹೋಗಿದ್ದರು ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದರು.
ಇದನ್ನೂ ಓದಿ: 150 ಕೋಟಿ ಆಮಿಷ ಆರೋಪ: ಬಿಎಸ್ವೈ, ವಿಜಯೇಂದ್ರ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ
ಈ ಕುರಿತಂತೆ ಬೆಳಗಾವಿ ಅಧಿವೇಶದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ತಮ್ಮ ಮೇಲಿನ ಆರೋಪದ ಬಗ್ಗೆ ಸೋಮವಾರ (ಇಂದು) ಉತ್ತರ ನೀಡಿದ್ದಾರೆ.