ಬೆಂಗಳೂರು: "ದೇಶಾದ್ಯಂತ ಪಕ್ಷ ಸಂಘಟನಾ ಪರ್ವ ಪ್ರಕ್ರಿಯೆ ನಡೆಯುತ್ತಿದೆ. ಸದಸ್ಯತ್ವ ಅಭಿಯಾನ, ಸಕ್ರಿಯ ಸದಸ್ಯ ಅಭಿಯಾನ, ಜಿಲ್ಲಾ ಮಂಡಲ ಸದಸ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಬೆಂಗಳೂರಿಗೆ ಬಂದಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಬೆಂಗಳೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ಇಂದು ಆತ್ಮೀಯವಾಗಿ ಬರಮಾಡಿಕೊಂಡ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
"ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಇಡೀ ದಿನ ಸಂಘಟನಾ ಸಭೆಗಳು ನಡೆಯಲಿವೆ. ಈ ವಿಚಾರ ಬಿಟ್ಟರೆ ರಾಜಕೀಯವಾಗಿ ಬೇರೇನೂ ಇಲ್ಲ. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚರ್ಚಿಸಲು ಅವರು ಬಂದಿಲ್ಲ. ರಾಜಕೀಯ ಸಂಬಂಧ ವಿಚಾರವಾಗಿದ್ದರೆ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಬರುತ್ತಿದ್ದರು. ಸಂಘಟನೆ ದೃಷ್ಟಿಯಿಂದ ಮಾತ್ರ ತರುಣ್ ಚುಗ್ ಭೇಟಿ ನೀಡಿದ್ದಾರೆ" ಎಂದು ವಿಜಯೇಂದ್ರ ಹೇಳಿದರು.
ಸರಣಿ ಸಭೆ: ಸಂಘಟನಾ ಪರ್ವದ ಪ್ರಕ್ರಿಯೆ ಚುರುಕು, ಮಾರ್ಗಸೂಚಿ ನೀಡಲೆಂದು ರಾಜ್ಯ ಬಿಜೆಪಿ ಸರಣಿ ಸಭೆಗಳು ಇಂದು ನಡೆಯಲಿವೆ. ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರಾಥಮಿಕ, ಸಕ್ರಿಯ ಸದಸ್ಯತ್ವ ಸಮಿತಿಗಳು, ಜಿಲ್ಲಾ ಅಧ್ಯಕ್ಷರು, ಬೂತ್, ಮಂಡಲ, ಜಿಲ್ಲಾ ಸಮಿತಿಗಳ ಪುನಾರಚನೆಯ ಚುನಾವಣಾಧಿಕಾರಿಗಳು ಸೇರಿ 30 ಪ್ರಮುಖರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಶಾಸಕರೊಂದಿಗೆ ಸಭೆ ನಿಗದಿಯಾಗಿದ್ದು ಬೂತ್, ಮಂಡಲ ಮತ್ತು ಜಿಲ್ಲಾಮಟ್ಟದ ಸಮಿತಿಗಳ ಪುನಾರಚನೆ ಪ್ರಕ್ರಿಯೆ ಮಾಹಿತಿ, ಮಾರ್ಗಸೂಚಿ ಹಂಚಿಕೊಂಡು, ಪದಾಧಿಕಾರಿಗಳ ಆಯ್ಕೆ ಸುಗಮವಾಗಿ ನಿರ್ವಹಿಸಲು ಶಾಸಕರ ಸಹಕಾರ ಪಡೆಯುವ ಬಗ್ಗೆ ಚರ್ಚೆ ನಡೆಯಲಿದೆ.
ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: CPI (M)ಗೆ ಮತ್ತೊಂದು ಆಘಾತ; ಬಿಜೆಪಿ ಸೇರಿದ ಮಧು ಮುಲ್ಲಸ್ಸೆರಿ