ವರಂಗಲ್, ತೆಲಂಗಾಣ: ಶಿಲ್ಪಕಲೆ ಎಂದಾಕ್ಷಣ ನಮಗೆಲ್ಲ ನೆನಪಾಗುವುದು ಕಾಕತೀಯರ ಕಾಲ. ಅವು ಆ ಕಲೆಗೆ ಇಟ್ಟ ಹೆಸರು ಕೂಡಾ ಹೌದು. ತೆಲಂಗಾಣದ ಅನೇಕ ಪ್ರದೇಶಗಳಲ್ಲಿ ಈ ಕಲೆಯನ್ನು ಇಂದಿಗೂ ಅಭ್ಯಾಸ ಮಾಡಲಾಗುತ್ತಿದೆ. ಕಾಕತೀಯ ರಾಜರು ಕಟ್ಟಿದ ಕೋಟೆಗಳು ಈಗಲೂ ಇವೆ. ಅದರಲ್ಲೂ ವರಂಗಲ್ನಲ್ಲಿರುವ ಕಾಕತೀಯರ ಭವನಗಳು ಅವರ ಭವ್ಯ ಇತಿಹಾಸವನ್ನು ಸಾರಿ ಸಾರಿ ಹೇಳುತ್ತಿವೆ. ಅನೇಕ ವಿದೇಶಿ ಬರಹಗಾರರು ಇಲ್ಲಿನ ಕಲೆಗಳ ಬಗ್ಗೆ ತಮ್ಮ ತಮ್ಮ ಪುಸ್ತಕಗಳಲ್ಲಿ ವಿವರಿಸಿದ್ದಾರೆ. ರಾಮಪ್ಪ ದೇವಸ್ಥಾನ, ಸಾವಿರ ಕಂಬದ ದೇವಸ್ಥಾನದಂತಹ ಅನೇಕ ಅದ್ಭುತ ಕಟ್ಟಡಗಳನ್ನು ನಾವು ಕಾಕತೀಯರ ನಾಡಲ್ಲಿ ಕಾಣಬಹುದಾಗಿದೆ.
ಹೌದು ಇಷ್ಟೆಲ್ಲ ವೈಭವದ ಬಗ್ಗೆ ನಾವು ಮಾತನಾಡಿದೆವು ಇನ್ನೂ ಅಚ್ಚರಿ ಎಂದರೆ ಭೂಗರ್ಭದಲ್ಲಿ ನಿರ್ಮಾಣವಾಗಿರುವ ದೇವಾಲಯದ ಬಗ್ಗೆ ನಿಮಗೆ ಗೊತ್ತಿದೆಯೇ? ಗೊತ್ತಿಲ್ಲ ಎಂದರೆ ನಾವು ಇಂದು ಆ ಬಗ್ಗೆ ಹೇಳುತ್ತೇವೆ.
![underground-temple-in-warangal-](https://etvbharatimages.akamaized.net/etvbharat/prod-images/04-12-2024/23029695_1_0412newsroom_1733276549_200.jpg)
100 ಕ್ಕೂ ಹೆಚ್ಚು ದೇವಾಲಯಗಳು: ಇದು ಐತಿಹಾಸಿಕ ಓರುಗಲ್ಲು ಖಿಲಾ ವರಂಗಲ್‌ನ ಮಣ್ಣಿನ ಕೋಟೆಯ ಉತ್ತರ ಭಾಗದಲ್ಲಿರುವ ಕಾಕತೀಯರ ಕಾಲದ ಭೂಗತ ತ್ರಿಕೂಟಾಲಯವಾಗಿದೆ. ಪಾಳುಬಿದ್ದ ಪ್ರದೇಶದಲ್ಲಿದ್ದ ಈ ದೇವಾಲಯವನ್ನು ಪುರಾತತ್ವ ಇಲಾಖೆ ಗುರುತಿಸಿದೆ. ಓರುಗಲ್ಲು ಕೋಟೆಯ ಸಂಕೀರ್ಣವನ್ನು ಶ್ರೀ ಚಕ್ರದ ಆಕಾರದಲ್ಲಿ 7 ಪ್ರತ್ಯೇಕ ಕಟ್ಟಡಗಳೊಂದಿಗೆ ನಿರ್ಮಿಸಲಾಗಿದೆ. ಇಲ್ಲಿ 100 ಕ್ಕೂ ಹೆಚ್ಚು ದೇವಾಲಯಗಳಿವೆ ಎಂದು ಇತಿಹಾಸಕಾರರು 'ಏಕಾಮ್ರನಾಥುನಿ ಪ್ರತಾಪರುದ್ರಿಯಂ ಗ್ರಂಥಮ್' ಆಧರಿಸಿ ಪ್ರತಿಪಾದಿಸುತ್ತಿದ್ದಾರೆ.
ಈ ದೇಗುಲದ ರಕ್ಷಣೆ ಆಗಬೇಕಿದೆ: ಈ ಬಗ್ಗೆ ಮಾತನಾಡಿರುವ ಯುವ ಇತಿಹಾಸ ಸಂಶೋಧಕ ಅರವಿಂದ ಆರ್ಯ, ಆಕ್ರಮಣಗಳಿಂದ ರಕ್ಷಿಸಲು ದೇವಾಲಯವನ್ನು ನೆಲದಡಿ ನಿರ್ಮಿಸಿರಬಹುದು. ನಾಡು ಕೋಟೆಯನ್ನು ಕಾವಲು ಕಾಯುತ್ತಿದ್ದ ಸೈನಿಕರು ಇಲ್ಲಿ ನಿತ್ಯ ಪೂಜೆ ಸಲ್ಲಿಸುತ್ತಿದ್ದರು. ಕಾಲಕ್ರಮೇಣ ದೇವಾಲಯ ನಾಶವಾಗಿ ವೈಭವವನ್ನು ಕಳೆದುಕೊಂಡಿದೆ ಅಂತಿದ್ದಾರೆ ಇವರು. ಭೂಗರ್ಭದಲ್ಲಿ ಇನ್ನೂ ದೇವಾಲಯಗಳಿರಬಹುದು ಎಂದು ಹೇಳಲಾಗಿದ್ದು, ಪ್ರಸ್ತುತ 3 ದೇವಾಲಯಗಳ ಕುರುಹುಗಳು ಮಾತ್ರ ಗೋಚರಿಸುತ್ತಿವೆ. ಐತಿಹಾಸಿಕ ಮಹತ್ವವುಳ್ಳ ಈ ದೇವಾಲಯವನ್ನು ಸಂರಕ್ಷಿಸಬೇಕು ಎಂಬುದು ಇತಿಹಾಸಕಾರರ ಒತ್ತಾಯವಾಗಿದೆ
![underground-temple-in-warangal-](https://etvbharatimages.akamaized.net/etvbharat/prod-images/04-12-2024/23029695_2_0412newsroom_1733276549_938.jpg)
ವಿಶ್ವ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಸ್ಥಾನ: ವರಂಗಲ್ ಎಂದಾಕ್ಷಣ ನೆನಪಿಗೆ ಬರುವುದು ಸಾವಿರ ಕಂಬದ ದೇವಸ್ಥಾನ ಮತ್ತು ರಾಮಪ್ಪ ದೇವಸ್ಥಾನ. ಇತ್ತೀಚೆಗಷ್ಟೇ ರಾಮಪ್ಪನ ದೇವಸ್ಥಾನ ಯುನೆಸ್ಕೋದಿಂದ ಮಾನ್ಯತೆ ಪಡೆದಿದೆ. ಇದರೊಂದಿಗೆ ಈ ದೇವಾಲಯವನ್ನು ವಿಶ್ವ ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರಿಸಲಾಗಿದೆ. ಅಲ್ಲದೇ ಇಲ್ಲಿ ಎಲ್ಲೂ ಇಲ್ಲದ ಸಾವಿರ ಕಂಬಗಳ ದೇವಾಲಯವಿದೆ. ಈ ದೇವಾಲಯಕ್ಕೂ ವಿಶಿಷ್ಟ ಇತಿಹಾಸವಿದೆ. ಹಾಗೆಯೇ ಕಾಕತೀಯ ಸಂಸ್ಕೃತಿ ಇಂದಿಗೂ ತನ್ನದೇ ಛಾಪನ್ನು ಹೊಂದಿದೆ. ಇದು ತೆಲಂಗಾಣ ರಾಜಮುದ್ರಾದಲ್ಲಿದೆ. ಇವೆಲ್ಲವನ್ನೂ ಸಂರಕ್ಷಿಸಬೇಕಾಗಿದೆ.
ಇದನ್ನು ಓದಿ:6 ಚರ್ಚ್ಗಳನ್ನು ಆರ್ಥೊಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಜಾಕೋಬೈಟ್ ಚರ್ಚ್ಗೆ ಸುಪ್ರೀಂ ಕೋರ್ಟ್ ಆದೇಶ