ಮಂಗಳೂರು: ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಬೃಹತ್ ಅಭಿಯಾನಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಇಂದು ಚಾಲನೆ ನೀಡಿದರು. ಆರೋಗ್ಯ ಕಾರ್ಯಕರ್ತರೊಂದಿಗೆ ಮನೆ ಮನೆಗಳಿಗೆ ಭೇಟಿ ನೀಡಿದ ಸಚಿವರು, ನೀರು ನಿಂತ ಸ್ಥಳಗಳಲ್ಲಿ ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನು ಪರಿಶೀಲಿಸಿದರು.

ಮನೆಗಳ ಅಕ್ಕಪಕ್ಕದಲ್ಲಿರುವ ತೆಂಗಿನ ಚಿಪ್ಪು, ಟಬ್ಗಳು, ಟಯರ್ ಸೇರಿದಂತೆ ಮನೆಯ ಮಹಡಿ ಮೇಲೆ ನಿಂತಿರುವ ನೀರಿನಲ್ಲಿ ಈಡಿಸ್ ಸೊಳ್ಳೆಯ ಲಾರ್ವಾಗಳು ಉತ್ಪತ್ತಿಯಾಗಿರುವ ಸ್ಥಳಗಳನ್ನು ಪರಿಶೀಲಿಸಿದರು. ಲಾರ್ವಾ ನಾಶಪಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಕೈಗೊಳ್ಳುತ್ತಿರುವ ಕ್ರಮಗಳನ್ನು ವೀಕ್ಷಿಸಿದರು. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಸ್ಥಳೀಯ ನಿವಾಸಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಡೆಂಗ್ಯೂ ನಿಯಂತ್ರಣಕ್ಕೆ ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ಪ್ರತಿ ಶುಕ್ರವಾರ ಆರೋಗ್ಯ ಇಲಾಖೆ ಅಭಿಯಾನದ ರೀತಿಯಲ್ಲಿ ಕಾರ್ಯಕ್ರಮ ಹಾಕಿಕೊಂಡಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕು. ಆರೋಗ್ಯ ಸಿಬ್ಬಂದಿ ಪ್ರತಿ ಮನೆಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜನರು ತಮ್ಮ ಮನೆಯ ಸುತ್ತಮುತ್ತಲಿನ ಸ್ಥಳಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನು ಪತ್ತೆ ಹಚ್ಚಿ ಅದನ್ನು ನಾಶಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.

ಡೆಂಗ್ಯೂ ಜ್ವರ ಹೆಚ್ಚು ಕಂಡುಬಂದಿರುವ ಹಾಟ್ ಸ್ಪಾಟ್ಗಳನ್ನು ಗುರುತಿಸಿ, ಫೀವರ್ ಕ್ಲಿನಿಕ್ಗಳನ್ನು ತೆರೆಯಲು ಸೂಚಿಸಲಾಗಿದೆ. ಇಂತಹ ಸ್ಥಳಗಳಲ್ಲಿ ಯಾರಿಗೆ ಜ್ವರ ಬಂದರುೂ ಡೆಂಗ್ಯೂ ಟೆಸ್ಟಿಂಗ್ ನಡೆಸಿ ಸಾಧ್ಯವಾದಷ್ಟು ಮುಂಚಿತವಾಗಿಯೇ ಪತ್ತೆ ಮಾಡಿ ಚಿಕಿತ್ಸೆ ಒದಗಿಸಲು ಸೂಚಿಸಲಾಗಿದೆ. ಇದರಿಂದ ಸಾವುಗಳನ್ನು ತಡೆಯಲು ಸಾಧ್ಯ. ಡೆಂಗ್ಯೂ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಜೊತೆಗೆ ಗ್ರಾಮೀಣಾಭಿವೃದ್ದಿ ಇಲಾಖೆ, ಜಿಲ್ಲಾಡಳಿತ, ಸ್ಥಳೀಯ ಪಾಲಿಕೆ ಅಧಿಕಾರಿಗಳು ಹಾಗೂ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಶಕ್ತಿ ಯೋಜನೆ: ದಾವಣಗೆರೆ ಕೆಎಸ್‌ಆರ್‌ಟಿಸಿ ಘಟಕಕ್ಕೆ ನಿರೀಕ್ಷೆ ಮೀರಿ ಆದಾಯ - Shakti Scheme