ಮಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024 ಆರಂಭವಾಗಿ 4 ದಿನಗಳು ಕಳೆದಿವೆ. ಭಾರತ ಇದೂವರೆಗೂ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಭಾರತದ ಕ್ರೀಡಾಪಟುಗಳು ಪ್ಯಾರಿಸ್ಗೆ ತೆರಳಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದ ಮಹಿಳಾ ಅಥ್ಲೀಟ್ ಕೂಡ ಸೇರಿದ್ದಾರೆ. ರಾಜ್ಯದ ಮಂಗಳೂರಿನಿಂದ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿರುವ ಅಥ್ಲೀಟ್ ಎಂ.ಆರ್.ಪೂವಮ್ಮ 4x400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಬೇಟೆಯ ನಿರೀಕ್ಷೆಯಲ್ಲಿದ್ದಾರೆ. ಆಕೆಯ ಹೆತ್ತವರು ಕೂಡು ಮಗಳು ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ಈಗಾಗಲೇ ಪೂವಮ್ಮ ಪ್ಯಾರೀಸ್ ತಲುಪಿದ್ದಾರೆ. 4x400 ಮೀಟರ್ ರಿಲೇಯಲ್ಲಿ ನಾಲ್ಕು ಜನರ ತಂಡದಲ್ಲಿ ಪೂವಮ್ಮ ಕೂಡ ಒಬ್ಬರಾಗಿದ್ದಾರೆ. ಆಗಸ್ಟ್ 9 ರಂದು ಅವರ ಸ್ಪರ್ಧೆ ನಡೆಯಲಿದೆ. ಈ ಹಿಂದೆ ಪೂವಮ್ಮ 2008 ಮತ್ತು 2016ರ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದರು. ಅವರ ತಂಡ ಗೆಲುವಿಗೆ ಪ್ರಯತ್ನ ಪಟ್ಟಿತ್ತಾದರೂ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿ ಈ ತಂಡ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಪ್ಯಾರಿಸ್ಗೆ ಹಾರಿದೆ.
ಮಗಳ ಸಾಧನೆ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಪೂವಮ್ಮ ತಂದೆ ರಾಜು, "20 ವರ್ಷದಿಂದ ಪೂವಮ್ಮ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಠಿಣ ಪರಿಶ್ರಮ ಪಡುತ್ತಿದ್ದಾರೆ ಜತಗೆ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ವಿಶ್ವಾಸ ಇದೆ. ಮೆಡಲ್ ಬರಬಹುದು ಎಂದು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಪೂವಮ್ಮ ಕೂಡ ಅದಕ್ಕೆ ತಕ್ಕಂತೆ ಕಠಿಣ ಅಭ್ಯಾಸವನ್ನೂ ಮಾಡಿಯೇ ಒಲಿಂಪಿಕ್ಸ್ಗೆ ತೆರಳಿದ್ದಾರೆ" ಎಂದರು.
ಬಳಿಕ ಪೂವಮ್ಮ ತಾಯಿ ಜಾಜಿ ರಾಜು ಮಾತನಾಡಿ, "ಪೂವಮ್ಮ ತನ್ನ ಮದುವೆ ದಿನ ಕೂಡ ಒಲಿಂಪಿಕ್ಸ್ ಕ್ರೀಡೆ ಗೋಸ್ಕರ ಪ್ರಾಕ್ಟಿಸ್ ಮಾಡಿದ್ದಾರೆ. 7ನೇ ತರಗತಿಯಿಂದಲೇ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದು, ಏಷ್ಯಡ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. 2014, 2018ರಲ್ಲಿ ಈ ಸಾಧನೆ ಮಾಡಿದ್ದಾಳೆ. ಜತೆಗೆ ಅರ್ಜುನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಆದರೆ ಕ್ರೀಡೆಯಲ್ಲಿ ಇನ್ನೂ ಹೆಚ್ಚು ಸಕ್ರಿಯರಾಗಿರಲು ಸರಕಾರಗಳಿಂದ ಹೆಚ್ಚಿನ ಧನಸಹಾಯ ಸಿಗುತ್ತಿಲ್ಲ. ಈ ಹಿಂದೆ ಇದಕ್ಕಾಗಿ ಅರ್ಜಿ ಕೊಟ್ಟರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ".
"ಈ ಬಾರಿ ಒಲಿಂಪಿಕ್ಸ್ಗೆ 5 ಲಕ್ಷ ಕೊಟ್ಟಿದ್ದಾರೆ. ಆದರೇ ಒಲಿಂಪಿಕ್ಸ್ ತಯಾರಿಗಾಗಿ ಸಾಕಷ್ಟು ಖರ್ಚು ಆಗಿದೆ. ಕ್ರೀಡಾ ಪಟುಗಳಿಗೆ ಸರಕಾರ ಹೆಚ್ಚಿನ ಪ್ರೋತ್ಸಾಹ ಧನ ನೀಡಬೇಕು. ಬೇರೆ ರಾಜ್ಯಗಳಲ್ಲಿ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಹೆಚ್ಚಿನ ಧನ ಸಹಾಯ ಸಿಗುತ್ತದೆ. 2018 ರಿಂದ ಒಲಿಂಪಿಕ್ಸ್ನಲ್ಲಿ ಭಾಗವಹಿಸುವವರಿಗೆ ಕೇವಲ ಐದು ಲಕ್ಷ ಮಾತ್ರ ಕೊಡುತ್ತಿದ್ದಾರೆ. ಹಾಗಾಗಿ ಇದನ್ನು ಹೆಚ್ಚಿಸಬೇಕು" ಎಂದು ಮನವಿ ಮಾಡಿದರು.