ಮೈಸೂರು: ಕಲಾವಿದ ಅರುಣ್ ಯೋಗಿರಾಜ್ ನಮ್ಮ ದೇಶದ ಆಸ್ತಿ. ಅವರೊಂದಿಗೆ ನಾನು ದೂರವಾಣಿಯಲ್ಲಿ ಮಾತನಾಡಿದ್ದೇನೆ. ಯಾವ ಕಾರಣಕ್ಕಾಗಿ ಅಮೆರಿಕದ ವೀಸಾ ರಿಜೆಕ್ಟ್ ಆಯಿತು ಎಂಬುದು ಗೊತ್ತಿಲ್ಲ. ಹೆಚ್ಚಿನ ಮಾಹಿತಿ ಪಡೆದು ಕೇಂದ್ರ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಬಿಜೆಪಿ ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ಇಂದು ನಗರದ ಕಾಡಾ ಕಚೇರಿಯಲ್ಲಿ ಸಾರ್ವಜನಿಕರ ಕೊಂದುಕೊರತೆಗಳನ್ನು ವಿಚಾರಿಸಲು ಕಚೇರಿ ಉದ್ಘಾಟಿಸಿದ ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ಪರಿಷ್ಕರಣೆ ಆಗಲಿವೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಬಾರದು. ಈ ಯೋಜನೆಗಳಿಗಾಗಿಯೇ ಜನ ಅವರಿಗೆ ಅಧಿಕಾರ ನೀಡಿದ್ದಾರೆ. ಆದ್ದರಿಂದ ಗ್ಯಾರಂಟಿ ಯೋಜನೆಗಳು ಮುಂದುವರೆಯಬೇಕು ಎಂದು ಯದುವೀರ್ ಹೇಳಿದರು.
ಚಾಮುಂಡಿಬೆಟ್ಟ ಈಗ ಹೇಗಿದೆಯೋ ಹಾಗೇ ಮುಂದುವರೆಯಲಿ. ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮುಂದುವರೆಸುವುದಾಗಿ ಈಗಾಗಲೇ ನಮ್ಮ ತಾಯಿ ಹೇಳಿದ್ದಾರೆ ಎಂದರು.
ಇನ್ನು, ಕಾಲಕಾಲಕ್ಕೆ ರಾಜ್ಯದ ಎಲ್ಲಾ ಜಲಾಶಯಗಳ ಪರಿಶೀಲನೆ ಹಾಗೂ ದುರಸ್ಥಿ ಕೆಲಸವನ್ನು ಮಾಡಬೇಕು. ಕೆಆರ್ಎಸ್ ಅಣೆಕಟ್ಟಿಗೆ ನೂರು ವರ್ಷಗಳಾಗಿರುವುದಿಂದ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಮೈಸೂರು ಚಲೋ ಪಾದಯಾತ್ರೆಗೆ ಬದಲಿಗೆ ಮತ್ತೊಂದು ಬಳ್ಳಾರಿಗೆ ಪಾದಯಾತ್ರೆ ನಡೆಸುವ ವಿಚಾರ ಗೊತ್ತಿಲ್ಲ. ಈ ಬದಲಿ ಪಾದಯಾತ್ರೆ ಸಭೆಯಲ್ಲಿ ಭಾಗಿಯಾದವರನ್ನೇ ಕೇಳಿ. ಇದರ ಬಗ್ಗೆ ನಾನೇನು ಹೇಳುವುದಿಲ್ಲ ಎಂದರು.
ಅಮೆರಿಕದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನಕ್ಕೆ ನನಗೆ ಆಹ್ವಾನ ಇತ್ತು. ಅದರಂತೆ ನಾನು ಹಾಗೂ ನನ್ನ ಕುಟುಂಬ ಹೋಗಲು ವೀಸಾಗೆ ಅರ್ಜಿ ಸಲ್ಲಿಸಿದ್ದೆವು. ಎಲ್ಲಾ ಮಾಹಿತಿ ನೀಡಿದ್ದೆವು. ಆದರೆ ನಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ, ನಮಗೆ ಒಂದು ಚೀಟಿ ಕೊಟ್ಟು ವೀಸಾ ನಿರಾಕರಣೆ ಮಾಡಿದ್ದಾರೆ. ಈ ಬಗ್ಗೆ ಸಂಸದರಾದ ಯದುವೀರ್ ಒಡೆಯರ್ ನನ್ನಿಂದ ಮಾಹಿತಿ ಪಡೆದಿದ್ದಾರೆ. ಆದರೆ ನಾನು ಪುನಃ ವೀಸಾ ಪಡೆಯಲು ಅರ್ಜಿ ಸಲ್ಲಿಸುವುದಿಲ್ಲ. ಸಂಸದರು ಕೇಂದ್ರದ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ ಎಂದು 'ಈಟಿವಿ ಭಾರತ್'ಗೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಮಾಹಿತಿ ನೀಡಿದರು.
ಇದನ್ನೂ ಓದಿ: ಧಾರ್ಮಿಕ ಸ್ಥಳಗಳಲ್ಲಿ ಸರ್ಕಾರದ ಮಧ್ಯಪ್ರವೇಶ ಸರಿಯಲ್ಲ: ಸಂಸದ ಯದುವೀರ್ ಒಡೆಯರ್ - Chamundi Hill Authority