ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಬಿಂಗಾನಹಳ್ಳಿ ಗ್ರಾಮದ ಸಮೀಪ ಗದ್ದೆಯಲ್ಲಿ ಟೊಮ್ಯಾಟೊ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಂಗಾನಹಳ್ಳಿ ಗ್ರಾಮದ ಶ್ರೀನಿವಾಸ ಅಲಿಯಾಸ್ ಸೀನಪ್ಪ ಬಂಧಿತ.
ಆರೋಪಿಯು ಟೊಮ್ಯಾಟೊ ತೋಟದ ಒಳ ಭಾಗದಲ್ಲಿ ತೊಗರಿ ಗಿಡಗಳ ಮಧ್ಯದಲ್ಲಿ ಅಲ್ಲಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದನು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಎಸ್ಪಿ ರಾಜಾ ಐ.ಇಮಾಮ್ ಖಾಸಿಂ, ಡಿವೈಎಸ್ಪಿ ಮುರಳೀಧರ್, ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಗಾಂಜಾ ಗಿಡಗಳನ್ನು ಬೆಳೆಸಲು ಯಾವುದಾದರೂ ಪರವಾನಗಿ ಇದೆಯೇ ಎಂದು ವಿಚಾರಣೆ ನಡೆಸಿ ನಂತರ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಬೆಳೆಸಿರುವ ಒಟ್ಟು 44 ಕೆಜಿ ತೂಕವಿರುವ 17,64,800 ರೂ ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.