ಚಿಕ್ಕೋಡಿ: ಮಣಿಪುರದ ಬೊಂಬಾಲಾ ಕ್ಷೇತ್ರದಲ್ಲಿ ಸೇನಾ ವಾಹನ ಪಲ್ಟಿಯಾಗಿ ಚಿಕ್ಕೋಡಿ ಮೂಲದ ಯೋಧ ಹುತಾತ್ಮರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪಾನವಾಡಿ ಗ್ರಾಮದ ಯೋಧ ಧರ್ಮರಾಜ ಸುಭಾಷ ಖೋತಾ(42) ಸಾವನ್ನಪ್ಪಿದವರು.
ಸೋಮವಾರ ಮಧ್ಯಾಹ್ನ ದಾರಿಮಧ್ಯೆ ಗುಡ್ಡ ಕುಸಿದ ಪರಿಣಾಮ ಸೇನೆಯ 2.5 ಡೈಟನ್ ವಾಹನ ಪಲ್ಟಿಯಾಗಿತ್ತು. ಸೇನಾ ವಾಹನದಲ್ಲಿ ಒಟ್ಟು ಆರು ಜನ ಯೋಧರು ಪ್ರಯಾಣಿಸುತ್ತಿದ್ದರು. ಆರು ಯೋಧರ ಪೈಕಿ ಇಬ್ಬರು ಯೋಧರು ಸಾವನ್ನಪ್ಪಿದ್ದು, ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿರುವ ಇಬ್ಬರು ಯೋಧರ ಪೈಕಿ ಓರ್ವ ಯೋಧ ಕುಪ್ಪಾನವಾಡಿ ಗ್ರಾಮದವರು. ಫೆಬ್ರವರಿ ತಿಂಗಳಲ್ಲಿ ನಿವೃತ್ತಿ ಆಗುವವರಿದ್ದರು. 2002ರಲ್ಲಿ ಸೇನೆಗೆ ಸೇರಿದ್ದ ಅವರು 22 ವರ್ಷ ಸೇವೆ ಸಲ್ಲಿಸಿದ್ದರು. ಹುತಾತ್ಮ ಯೋಧನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಂಗಳವಾರ ಮರಣೋತ್ತರ ಪರೀಕ್ಷೆ ತಡವಾದ ಹಿನ್ನೆಲೆ ಯೋಧ ಧರ್ಮರಾಜ ಪಾರ್ಥಿವ ಶರೀರ ಗುರುವಾರ ಮಧ್ಯಾಹ್ನ ಸ್ವಗ್ರಾಮ ಕುಪ್ಪಾನವಾಡಿಗೆ ಆಗಮಿಸಲಿದೆ.
ಯೋಧನ ಪಾರ್ಥಿವ ಶರೀರ ಗೋವಾಗೆ ವಿಮಾನದ ಮೂಲಕ ಬಂದು, ಬಳಿಕ ರಸ್ತೆ ಮಾರ್ಗವಾಗಿ ಸ್ವಗ್ರಾಮಕ್ಕೆ ಆಗಮಿಸಲಿದೆ. ಇನ್ನು ಯೋಧನ ಸಾವಿನ ಕುರಿತು ಸೇನೆಯವರು ಮನೆಯವರಿಗೆ ಇನ್ನೂ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಗ್ರಾಮದ ಹಿರಿಯರಿಗೆ ಸೇನೆಯಿಂದ ಮಾಹಿತಿ ರವಾನಿಸಿದ್ದಾರೆ. ಮಾಜಿ ಸೈನಿಕರು ಹಾಗೂ ಗ್ರಾಮದ ಹಿರಿಯರು ಜೊತೆಯಾಗಿ ಈಗಾಗಲೇ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಯೋಧನಿಗೆ ಅಂತಿಮ ಗೌರವ ಅರ್ಪಣೆ: ಹಿರಿಯ ಸೇನಾಧಿಕಾರಿಗಳು ಇಂಪಾಲದ ಸೈನ್ಯ ಶಿಬಿರದಲ್ಲಿ ಹುತಾತ್ಮ ಯೋಧರಿಗೆ ಅಂತಿಮ ಗೌರವ ಅರ್ಪಿಸಿದರು. ಅಂತಿಮ ಗೌರವ ಸಲ್ಲಿಸಿದ ಬಳಿಕ ವಿಮಾನದ ಮೂಲಕ ಗೋವಾಗೆ ಪಾರ್ಥಿವ ಶರೀರ ರವಾನೆ ಮಾಡಲಿದ್ದಾರೆ. ನಾಳೆ ರಸ್ತೆ ಮೂಲಕ ಸ್ವಗ್ರಾಮ ಚಿಕ್ಕೋಡಿ ತಾಲೂಕಿನ ಕುಪ್ಪಾನವಾಡಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಚಿಕ್ಕೋಡಿ ಉಪವಿಭಾಗದ ಅಧಿಕಾರಿ ಎಸ್ ಸಂಪಗಾವಿ ಮಾಹಿತಿ ನೀಡಿದರು.
ಇದನ್ನೂ ಓದಿ: ಕಾಶ್ಮೀರದಲ್ಲಿ ಸೇನಾ ವಾಹನ ಅಪಘಾತ- ಕರ್ನಾಟಕದ ಮೂವರು ಯೋಧರು ನಿಧನ: ಮಣಿಪುರದಲ್ಲಿ ಚಿಕ್ಕೋಡಿ ಸೈನಿಕ ಸಾವು