ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಸೆ.10ರ ಒಳಗೆ ಸಲ್ಲಿಸಬೇಕೆಂದು ದಸರಾ ಮೆರವಣಿಗೆ ಉಪಸಮಿತಿಯ ಉಪ ವಿಶೇಷಧಿಕಾರಿಯಾದ ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ ಅ.12 ರಂದು ನಡೆಯಲ್ಲಿದ್ದು, ಆ ಮೆರವಣಿಗೆಯಲ್ಲಿ ಭಾಗವಹಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಜಾನಪದ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಸೆ.10 ಕೊನೆ ದಿನವಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಮೆರವಣಿಗೆಯಲ್ಲಿ ಭಾಗವಹಿಸಲು ಬಯಸುವ ಕಲಾತಂಡಗಳು ತಮ್ಮ ತಂಡದ ಉತ್ತಮ ಭಾವಚಿತ್ರ, ತಂಡದ ಸದಸ್ಯರುಗಳ ವಿವರ, ಅಂಚೆ ವಿಳಾಸ ಹಾಗೂ ಮುಖ್ಯಸ್ಥರ ಮೊಬೈಲ್ ಸಂಖ್ಯೆ, ಇನ್ನಿತರ ವಿವರವನ್ನೊಳಗೊಂಡ ಅರ್ಜಿಯನ್ನು ಉಪ ವಿಶೇಷಾಧಿಕಾರಿಗಳು ದಸರಾ ಮೆರವಣಿಗೆ ಉಪಸಮಿತಿ ಹಾಗೂ ಪೊಲೀಸ್ ಆಯುಕ್ತರು ಮೈಸೂರು ನಗರ ಅಥವಾ ಸಹಾಯಕ ನಿರ್ದೇಶಕರು (ಕೋ–ಆರ್ಡಿನೇಟರ್) ದಸರಾ ಮೆರವಣಿಗೆ ಉಪಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ಇವರಿಗೆ ಸಲ್ಲಿಸಬಹುದು.
ಅರ್ಜಿಯನ್ನು ಸಲ್ಲಿಸಿದ ಕಲಾತಂಡಗಳ ಪೈಕಿ ತಜ್ಞರ ಸಮಿತಿ ಮೂಲಕ ಉತ್ತಮ ಪೋಷಾಕು, ಸಾಂಪ್ರದಾಯಿಕ, ವಿಶಿಷ್ಟ ಶೈಲಿ ಹಾಗೂ ಕಲಾ ಪ್ರಕಾರವನ್ನು ಪ್ರದರ್ಶಿಸುವ ತಂಡಗಳನ್ನು ಆಯ್ಕೆ ಮಾಡಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ದಸರಾ ಗಜಪಡೆಯ ತೂಕ ಪರೀಕ್ಷೆ: ಅಂಬಾರಿ ಹೊರುವ ಅಭಿಮನ್ಯು ಬಲಾಢ್ಯ, ಯಾವ ಆನೆ ಭಾರ ಎಷ್ಟು? - Dasara Gajapade weight test