ಗಂಗಾವತಿ (ಕೊಪ್ಪಳ): ವಿಜಯನಗರ ಸಾಮ್ರಾಜ್ಯದ ಮೂಲ ರಾಜಧಾನಿ ಆನೆಗೊಂದಿಯ ರಾಜವಂಶಕ್ಕೆ ಸೇರಿದ ರಾಜಾ ರಾಮದೇವರಾಯ ಪತ್ನಿ ರಾಣಿ ವಿಜಯಲಕ್ಷ್ಮಿ ಅವರು ಬುಧವಾರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಣಿ ವಿಜಯಲಕ್ಷ್ಮಿ ಇಂದು ಸಾವನ್ನಪ್ಪಿದ್ದಾರೆ. ಮೃತರಿಗೆ ಪತಿ ರಾಮದೇವರಾಯ, ಪುತ್ರ ಹರಿಹರದೇವರಾಯ ಸೇರಿದಂತೆ ಬಂಧು-ಬಳಗವಿದೆ. ಮೃತರ ಅಂತ್ಯ ಸಂಸ್ಕಾರ ಹಿಂದು ಸಂಪ್ರದಾಯದಂತೆ ಆನೆಗೊಂದಿ ಗ್ರಾಮದ ಅವರ ತೋಟದಲ್ಲಿ ಸಂಜೆ ನೆರವೇರಿಸಲಾಯಿತು.
ಮೂಲತಃ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪತ್ತಿಪಾಡು ಗ್ರಾಮದ ವಿಜಯಲಕ್ಷ್ಮಿ, 1988ರಲ್ಲಿ ರಾಜರಾಮದೇವರಾಯ ಅವರನ್ನು ವಿವಾಹವಾಗುವ ಮೂಲಕ ಆನೆಗೊಂದಿ ರಾಜ ಕುಟುಂಬದ ಪರಿವಾರದ ಸದಸ್ಯೆಯಾಗಿದ್ದರು.