ಮೈಸೂರು: ಹಿಂದೂಗಳ ಹೊಸ ವರ್ಷದ ಹಬ್ಬ ಯುಗಾದಿಯನ್ನು ಹೇಗೆ ಆಚರಿಸಬೇಕು, ಈ ಹಬ್ಬದ ವಿಶೇಷತೆಗಳು, ಬೇವು-ಬೆಲ್ಲ ಮಹತ್ವ ಹಾಗೂ ಯುಗಾದಿಯ ದಿನ ಹೊಸ ಪಂಚಾಂಗ ಏಕೆ ಪೂಜೆ ಮಾಡುತ್ತಾರೆ?, ಪಂಚಾಂಗ ಎಂದರೆ ಏನು? ಎಂಬ ಹಲವು ವಿಚಾರಗಳ ಬಗ್ಗೆ ಪಂಚಾಂಗ ಬರಹಗಾರರಾದ ಜ್ಯೋತಿ ವಿಜ್ಞಾನಿ ಸಂಶೋಧನೆ ಸಂಸ್ಥೆಯ ಡಾ. ಜಿ.ಬಿ.ಅಮರೇಶ ಶಾಸ್ತ್ರಿ ಗುರೂಜಿ 'ಈಟಿವಿ ಭಾರತ್'ಗೆ ಮಾಹಿತಿ ನೀಡಿದ್ದಾರೆ.
"ಯುಗಾದಿ ಹಬ್ಬ ಹಿಂದೂಗಳ ಹೊಸ ವರ್ಷದ ಸೂಚನೆಯ ಹಬ್ಬವಾಗಿದ್ದು. ಇದು ನೈಸರ್ಗಿಕವಾಗಿಯೂ ಹಾಗೂ ಐತಿಹಾಸಿಕ ಮಹತ್ವವನ್ನು ಪಡೆದ ಹಬ್ಬವಾಗಿದೆ. ಯುಗಾದಿ ಹಬ್ಬ ಎಂದರೆ ಈ ಪದದಿಂದಲೇ ಈ ಚಿಂತನೆಯನ್ನು ಆರಂಭ ಮಾಡಬಹುದು. ಯುಗ ಎಂದರೆ ವರ್ಷ ಎಂದರ್ಥ. ಆದಿ ಎಂದರೆ ಆರಂಭ. ಭಾರತೀಯ ಪರಂಪರೆಯಲ್ಲಿ ರಾಷ್ಟ್ರೀಯ ಮತ್ತು ಧಾರ್ಮಿಕ ಹಬ್ಬಗಳಿವೆ. ಯುಗಾದಿಯ ಈ ದಿನ ಹೊಸ ಸಂವತ್ಸರ ಬರುವ ದಿನ. ಈ ದಿನ ಕ್ರೋದಿನಾಮ ಸಂವತ್ಸರ ಆರಂಭವಾಗುತ್ತದೆ. ಒಟ್ಟು ಚಾಂದ್ರಮಾನದಲ್ಲಿ 60 ಸಂವತ್ಸರ ಬರುತ್ತದೆ".
"ಯುಗಾದಿ ದಿನ ಇನ್ನೂ ಐತಿಹ್ಯಗಳಿವೆ. ಬ್ರಹ್ಮ ಸೃಷ್ಟಿ ಆರಂಭ ಮಾಡಿದ. ಹಾಗೇ, ಮತ್ಸ್ಯಾವತಾರ ಇದೆ ದಿನ ಆಯಿತು. ಮತ್ತು ವಸಂತ ಋತುವಿನ ಆರಂಭ ದಿನ. ಮತ್ತು ಸಂವತ್ಸವರದ ಆರಂಭ ದಿನ, ಮತ್ತು ಶಾಲಿವಾಹನ ಆರಂಭದ ದಿನವೂ ಹೌದು. ಯುಗಾದಿ ದಿನ ಸೂರ್ಯ ಉದಯಕ್ಕೂ ಮುನ್ನ ಎದ್ದು, ಎಣ್ಣೆ ಸ್ನಾನ ಮಾಡಿ, ಸೃಷ್ಟಿಕರ್ತನಿಗೆ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಸಲ್ಲಿಸಬೇಕು. ಬಳಿಕ ಬೇವು-ಬೆಲ್ಲವನ್ನು ಸೇವಿಸಬೇಕು. ಈ ಬೇವು-ಬೆಲ್ಲ ಜೀವನದಲ್ಲಿ ಕಷ್ಟ-ಸುಖಗಳೆಲ್ಲವನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸೂಚ್ಯವಾಗಿದ್ದು. ಇದರ ಜೊತೆಗೆ ನೈಸರ್ಗಿಕವಾಗಿಯೂ ಆರೋಗ್ಯಕರವಾಗಿದೆ" ಎಂದು ಹೇಳಿದರು.
"ಯುಗಾದಿಯನ್ನು ಹೇಗೆ ಆಚರಿಸಬೇಕು ಎಂಬುವುದು ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿದ್ದು. ಹಬ್ಬಗಳ ರಾಜ ಯುಗಾದಿ ಆಚರಣೆಯನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಾ ಬರಲಾಗಿದೆ. ಈ ದಿನ ಬೇವು-ಬೆಲ್ಲ ತಿನ್ನುವುದರ ಸೂಚನೆ ಕಷ್ಟ-ಸುಖಗಳನ್ನು ಜೀವನದಲ್ಲಿ ಸಮಾನವಾಗಿ ಸ್ವೀಕರಿಸಬೇಕು ಎಂಬ ಅರ್ಥ ಬರುತ್ತದೆ'' ಎಂದು ತಿಳಿಸಿದರು.
"ಯುಗಾದಿ ದಿನ ಹೊಸ ಪಂಚಾಂಗವನ್ನು ಪೂಜೆ ಮಾಡಿ ನೀಡುತ್ತಾರೆ. ಆ ಮೂಲಕ ವರ್ಷದ ಫಲಾ-ಫಲಾಗಳು ಗ್ರಹಣಗಳು ರಾಜಯೋಗ, ಹಾಗೂ ಮಳೆ, ಬೆಳೆ, ಹೇಗೆ ಎಂಬುವುದು ಪಂಚಾಂಗದಿಂದ ತಿಳಿಯಬಹುದಾಗಿದೆ" ಎಂದು ಅಮರೇಶ ಶಾಸ್ತ್ರಿ ಗುರೂಜಿ ವಿವರಿಸಿದ್ದಾರೆ.
ಇದನ್ನೂ ಓದಿ: ಹೂ, ಹಣ್ಣು, ಮಾವು, ಬೇವು ಖರೀದಿ ಬಲು ಜೋರು; ಬಿರು ಬಿಸಿಲಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ - Ugadi Festival