ಬೆಂಗಳೂರು : ರಾಜ್ಯದಲ್ಲಿ ಗ್ಯಾರೆಂಟ್ ಕಾರ್ಡ್ಗಳ ವಿತರಣೆ ಮಾಡುವ ಮೂಲಕ ಅಕ್ರಮಗಳನ್ನು ನಡೆಸಿ ಆಯ್ಕೆಯಾಗಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ದಾವಣಗೆರೆ ಲೋಕಸಭಾ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಪರಾಜಿತ ಅಭ್ಯರ್ಥಿ ಜಿ.ಎಸ್. ಗಾಯಿತ್ರಿ ಸಿದ್ದೇಶ್ವರ್ ಹಾಗೂ ದಾವಣಗೆರೆ ನಿವಾಸಿ ಸುಭಾನ್ ಖಾನ್ ಅವರು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ದಾವಣಗೆರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಸೆ.19ಕ್ಕೆ ನ್ಯಾಯಾಲಯ ಮುಂದೂಡಿದೆ.
ಪ್ರಭಾ ಮಲ್ಲಿಕಾರ್ಜುನ್ ಅವರು ಗ್ಯಾರಂಟಿ ಕಾರ್ಡ್ ವಿತರಿಸಿ ಮತದಾರರಿಗೆ ಆಮಿಷವೊಡ್ಡಿದ್ದಾರೆ. ಅಲ್ಲದೆ, ಮಹಿಳೆಯರಿಗೆ 1 ಲಕ್ಷ ಕೊಡುವುದಾಗಿ ಭರವಸೆ ನೀಡಿದ್ದರು. ಇದು ಪ್ರಜಾಪ್ರತಿನಿಧಿ ಕಾಯ್ದೆಗೆ ವಿರುದ್ಧವಾಗಿದ್ದು, ಮತದಾರರಿಗೆ ಲಂಚದ ಆಮಿಷವೊಡ್ಡಿದ್ದಾರೆ ಮತ್ತು ಚುನಾವಣಾ ಅಕ್ರಮಗಳನ್ನು ನಡೆಸಿ ಅವರು ಆಯ್ಕೆಯಾಗಿದ್ದಾರೆ. ಆದ್ದರಿಂದ ಅವರ ಆಯ್ಕೆಯನ್ನು ಅಸಿಂಧುವೆಂದು ಘೋಷಣೆ ಮಾಡಬೇಕು ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.
ಓದಿ: ದರ್ಶನ್ ಮತ್ತು ಸಹಚರರು ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ; ದಾಸ ಬಳ್ಳಾರಿ ಜೈಲಿಗೆ - DARSHAN JAIL SHIFT