ಬೆಂಗಳೂರು: ಹುಣಸೂರು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾರ್ಡನ್ ಹಾಗೂ ಇತರ ಸಿಬ್ಬಂದಿ ಸೇರಿಕೊಂಡು 100 ಮಕ್ಕಳ ಬಯೋಮೆಟ್ರಿಕ್ ನಕಲು ಮಾಡಿ ಲಕ್ಷಾಂತರ ರೂಪಾಯಿ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ವಹಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಿಗೆ ಆದೇಶಿಸಿದ್ದೇನೆ. ಅವರು ಈಗಾಗಲೇ ಜಂಟಿ ನಿರ್ದೇಶಕರನ್ನು ಕಳುಹಿಸಿ ತನಿಖೆ ನಡೆಸುತ್ತಿದ್ದಾರೆ. ಪೂರ್ಣ ಪ್ರಮಾಣದ ವರದಿ ಕೈ ಸೇರಿದ ಕೂಡಲೇ ಇದಕ್ಕೆ ಕಾರಣಕರ್ತರಾದ ಎಲ್ಲಾ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.
ನಾನು ಇಲಾಖೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವ ವೇಳೆ ಇಂತಹ ಹಲವು ಪ್ರಕರಣಗಳು ನನ್ನ ಗಮನಕ್ಕೆ ಬಂದಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ನೀಡಿದ ದೂರುಗಳನ್ನು ಆಧರಿಸಿ ಇದನ್ನು ತಡೆಗಟ್ಟಲು ಅನುಕೂಲವಾಗುವಂತೆ ಸಂಪೂರ್ಣವಾಗಿ ಇಲಾಖೆಯ ಅಗತ್ಯಗಳಿಗೆ ಅನುಗುಣವಾದ ಸ್ವತಂತ್ರವಾದ ಹೊಸ ಸಾಫ್ಟ್ವೇರ್ ಒಂದನ್ನು ಸಿದ್ಧಪಡಿಸಲು ಈ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ನಾನು ಸೂಚಿಸಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಸಾಫ್ಟ್ವೇರ್ ಕನ್ಸಲ್ಟೆನ್ಸಿಯೊಂದಿಗೆ ಅನೇಕ ಚರ್ಚೆಗಳನ್ನು ನಡೆಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದಿದ್ದಾರೆ.
ನಿಗದಿತ ಮಾದರಿಯ ವಿಶೇಷ ಡ್ಯಾಶ್ ಬೋರ್ಡ್ ಒಂದನ್ನು ನಿರ್ಮಿಸಿ ಅದರಲ್ಲಿ ರಾಜ್ಯದ ಪ್ರತಿಯೊಂದು ವಿದ್ಯಾರ್ಥಿನಿಲಯದ ಜೊತೆ ನೇರ ಸಂಪರ್ಕ ಹೊಂದಲು ಉದ್ದೇಶಿಸಲಾಗಿದೆ. ಇಲಾಖಾ ಕಾರ್ಯದರ್ಶಿಗಳು ಹಾಗೂ ಆಯುಕ್ತರು ತಮ್ಮ ಕೇಂದ್ರ ಕಚೇರಿಯಲ್ಲಿ ಕುಳಿತುಕೊಂಡೇ ರಾಜ್ಯದ ಪ್ರತಿಯೊಂದು ವಿದ್ಯಾರ್ಥಿ ನಿಲಯದ ಎಲ್ಲಾ ಮಾಹಿತಿ, ಅಂಕಿ-ಅಂಶ, ವಿದ್ಯಾರ್ಥಿ ದಾಖಲಾತಿ ವಿವರ, ಆಹಾರ ಪದಾರ್ಥ ಸಂಗ್ರಹಣೆ ಇಂತಹ ಸಂಪೂರ್ಣ ಮಾಹಿತಿಯನ್ನು ಪರಿಶೀಲನೆ ಮಾಡಲು ಈ ಸಾಫ್ಟ್ ವೇರ್ನಲ್ಲಿ ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ಎಲ್ಲಿ, ಯಾವುದೇ ರೀತಿ ವ್ಯತ್ಯಾಸವಾದರೂ ಕೇಂದ್ರ ಕಚೇರಿಯಲ್ಲಿ ಇಲಾಖಾ ಕಾರ್ಯದರ್ಶಿಗಳು, ಆಯುಕ್ತರು ಇದರ ಕುರಿತು ಕೂಲಂಕಶ ಪರಿಶೀಲನೆ ಮಾಡಬಹುದಾಗಿದೆ. ಸಾಫ್ಟ್ವೇರ್ ಸಿದ್ಧಪಡಿಸುವ ಕೆಲಸ ಆರಂಭವಾಗಿದ್ದು, ಅದನ್ನು ಅಳವಡಿಸಿದ ಮೇಲೆ ಇಂತಹ ಯಾವುದೇ ಲೋಪದೋಷಗಳಿಗೆ ಅವಕಾಶವಿರುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಹುದ್ದೆಯ ಬಯಕೆ ವ್ಯಕ್ತಪಡಿಸಿದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ - Samyuktha Patil