ಮೈಸೂರು: ಸಾರಿಗೆ ಬಸ್ ಮತ್ತು ಟಿಪ್ಪರ್ ನಡುವಿನ ಓವರ್ಟೇಕ್ ವೇಳೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕ ಮಹಿಳೆಯೊಬ್ಬರು ಕುತ್ತಿಗೆ ಮತ್ತು ಕೈ ಕಟ್ ಆಗಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ಬಳಿ ಶನಿವಾರ ಸಂಭವಿಸಿದೆ.
ಬೇಗೂರು ಸಮೀಪದ ಆಲಹಳ್ಳಿ ಗ್ರಾಮದ ಶಿವಲಿಂಗಮ್ಮ (43) ಮೃತ ಮಹಿಳೆ ಎಂದು ತಿಳಿದು ಬಂದಿದೆ. ಅವರು ಮೈಸೂರಿನಿಂದ ಗುಂಡ್ಲುಪೇಟೆಗೆ ನಂಜನಗೂಡು ಮಾರ್ಗವಾಗಿ ತೆರಳುತ್ತಿದ್ದ ಸಾರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು.
ಈ ಸಂದರ್ಭದಲ್ಲಿ ಸಿಂಧುವಳ್ಳಿ ಗ್ರಾಮದ ಬಳಿ ಮಹಿಳೆಯು ಬಸ್ನ ಕಿಟಕಿಯಿಂದ ಕತ್ತನ್ನು ಹೊರಹಾಕಿದ್ದು, ಅದೇ ಸಮಯದಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಮತ್ತು ಸಾರಿಗೆ ಬಸ್ ನಡುವೆ ಕ್ಷಣಾರ್ಧದಲ್ಲಿ ಅಪಘಾತವಾಗಿದೆ. ಪರಿಣಾಮ ಶಿವಲಿಂಗಮ್ಮ ಕುತ್ತಿಗೆ ಮತ್ತು ಕೈ ಕಟ್ ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಗರ್ಭ ಧರಿಸಿದ್ದ ಗೋ ವಧೆ ಪ್ರಕರಣ : ಓರ್ವ ಆರೋಪಿ ಬಂಧನ
ನಂಜನಗೂಡು ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಸಿದ್ದರಾಜು ಮತ್ತು ಸಿಬ್ಬಂದಿ ಮಹೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಾರಿಗೆ ಬಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಾಪತ್ತೆಯಾಗಿರುವ ಟಿಪ್ಪರ್ ವಾಹನವನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.
ಮೃತ ಮಹಿಳೆಯ ಶವವನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಈ ಸಂಬಂಧ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಯುವತಿ ವಿಚಾರ: ಮಾಜಿ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ, ಹಾಲಿ ಪ್ರಿಯಕರನ ಬಂಧನ