ಬೆಳಗಾವಿ: ಖಾನಾಪುರ ತಾಲೂಕಿನ ಹಲಸಿ ಗ್ರಾಮದ ಬಳಿ ಕಾಡುಪ್ರಾಣಿ ಹಾಗೂ ಪಕ್ಷಿಯ ಬೇಟೆಗೆ ತೆರಳಿದ್ದ ವೇಳೆ ಬಂದೂಕಿನಿಂದ ಹಾರಿಸಿದ ಗುಂಡು ತಗಲಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಹಲಸಿ ಗ್ರಾಮದ ನಿವಾಸಿ ಅಲ್ತಾಫ್ ಗೌಸ್ ಮಕಾನದಾರ್ (30) ಮೃತ ಯುವಕ. ಯುವಕನ ಜೊತೆಗೆ ಕಾಡಿಗೆ ಬೇಟೆಗೆ ಹೋಗಿದ್ದ ಅದೇ ಊರಿನ ಮಕ್ತುಮ್ (ಬುಡ್ಡೆಲಿ) ಮೆಹಬೂಬ ಸುಬಾನಿ ತಹಸೀಲ್ದಾರ್, ಉಸ್ಮಾನಸಾಬ್ ತಹಸೀಲ್ದಾರ್, ಮಲೀಕ (ಇಸ್ಮಾಯಿಲ್) ಖತಾಲಸಾಬ್ ಶಾಹಿವಾಲೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಡುಹಂದಿ ಹಾಗೂ ನವಿಲು ಬೇಟೆಯಾಡಬೇಕು ಎಂದು ಭಾನುವಾರ ತಡರಾತ್ರಿ ನಾಲ್ವರು ಕಾಡಿಗೆ ಹೋಗಿದ್ದಾರೆ. ಹಲಸಿ–ಬೇಕವಾಡ ರಸ್ತೆಯ ನರಸೇವಾಡಿ ಸೇತುವೆ ಬಳಿ ಬೇಟೆಗಾಗಿ ಹೊಂಚುಹಾಕಿ ಕುಳಿತಿದ್ದರು. ಸೋಮವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಅವರಲ್ಲಿನ ಒಬ್ಬ ವ್ಯಕ್ತಿ, ನಾಡ ಬಂದೂಕಿನಿಂದ ನವಿಲಿಗೆ ಗುಂಡು ಹಾರಿಸಿದ್ದಾನೆ. ಗುರಿ ತಪ್ಪಿ ಗುಂಡು ಅಲ್ತಾಫ್ ಎದೆಗೆ ತಾಗಿದ್ದರಿಂದ, ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯುವಕನ ಶವವನ್ನು ಗ್ರಾಮಕ್ಕೆ ಹೊತ್ತುತಂದ ಸ್ನೇಹಿತರು ದಿಢೀರ್ ಅಂತ್ಯ ಸಂಸ್ಕಾರಕ್ಕೆ ತಯಾರಿ ಮಾಡಿದ್ದಾರೆ. ಇದರಿಂದ ಅನುಮಾನಗೊಂಡ ಅಲ್ತಾಫ್ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿದ ತಕ್ಷಣ ಪ್ರಕರಣ ಬಯಲಿಗೆ ಬಂದಿದೆ. ಉತ್ತರ ವಲಯ ಐಜಿಪಿ ವಿಕಾಶಕುಮಾರ್ ವಿಕಾಶ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂದಗಡ ಠಾಣೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಕೂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ''ಬಂದೂಕು ಹಾಗೂ ನವಿಲಿನ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ'' ಎಂದು ಹೇಳಿದರು.
ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಹೀಯಾಳಿಸುತ್ತಿದ್ದ ಸಹೋದ್ಯೋಗಿಗಳ ಹತ್ಯೆ: ಆರೋಪಿಯ ಬಂಧನ