ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಗಾಳಿ-ಮಳೆ ಮುಂದುವರೆದಿದೆ. ಭಾರೀ ಮಳೆಗೆ ರಸ್ತೆಯಲ್ಲಿ ಬಿದ್ದ ವಿದ್ಯುತ್ ತಂತಿ ತುಳಿದು ಶಾಲಾ ಬಾಲಕನಿಗೆ ಗಾಯವಾಗಿದೆ. ಈ ಘಟನೆ ಕೊಪ್ಪ ತಾಲೂಕಿನ ಹೆಚ್. ಹೊಸೂರು ಗ್ರಾಮದಲ್ಲಿ ಜರುಗಿದೆ.
ಎರಡನೇ ತರಗತಿ ವಿದ್ಯಾರ್ಥಿ ಕ್ರೀಶ್ (7)ಗೆ ಗಂಭೀರ ಗಾಯವಾಗಿದೆ. ಕೊಪ್ಪ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ಧರೆಗೆ ಬೀಳುತ್ತಿರುವುದು ಸಾಮಾನ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಮನಹರಿಸಬೇಕು ಎಂದು ಮಲೆನಾಡು ಭಾಗದ ಜನ ಒತ್ತಾಯಿಸಿದ್ದಾರೆ.
ಭದ್ರಾ ನದಿ ಹರಿವಿನ ಮಟ್ಟದಲ್ಲಿ ಏರಿಕೆ: ಮೂಡಿಗೆರೆ ತಾಲೂಕಿನ ಕುದುರೆಮುಖ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಭದ್ರಾ ನದಿ ಹರಿವಿನ ಮಟ್ಟದಲ್ಲಿ ಏರಿಕೆ ಕಂಡಿದೆ.
ಮುಳುಗುವ ಹಂತದಲ್ಲಿ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಇದ್ದು, ಇದೇ ರೀತಿ ಧಾರಾಕಾರವಾಗಿ ಮಳೆ ಮುಂದುವರೆದರೆ ಇಂದು ಅಥವಾ ನಾಳೆ ಸೇತುವೆ ಮುಳುಗುವ ಸಾಧ್ಯತೆ ಇದೆ. ಸೇತುವೆ ಮುಳುಗಡೆಗೆ 4-5 ಅಡಿಯಷ್ಟೇ ಬಾಕಿ ಇದ್ದು, ಮುಳುಗಡೆಯಾದರೆ ಹತ್ತಾರು ಹಳ್ಳಿಗಳ ಸಂಪರ್ಕ ಬಂದ್ ಆಗಲಿದೆ.
ಕಳಸ-ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಮಾರ್ಗವೂ ಬಂದ್ ಆಗಲಿದ್ದು, ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲೂ ಭಾರೀ ಮಳೆ ಆಗುತ್ತಿದೆ. ತುಂಗಾ ನದಿಯ ಒಳ ಹರಿವಿನ ಪ್ರಮಾಣದಲ್ಲೂ ಏರಿಕೆ ಕಂಡಿದ್ದು, ನಿರಂತರ ಮಳೆಯಿಂದ ನಾಡಿನ ಜೀವ ನದಿಗಳ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ ಉಂಟಾಗಿದೆ.