ವಿಜಯಪುರ: ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಕಲ್ಲು ಭೂಮಿಯಲ್ಲಿ ಬಂಗಾರದಂತಹ ಕ್ಯಾಪ್ಸಿಕಂ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಬಸವರಾಜ್ ಚೌಕಿಮಠ ಎಂಬುವರೇ ಬೆಳೆ ಬೆಳೆದು ಯಶಸ್ವಿಯಾದ ನಿವೃತ್ತ ಅಧಿಕಾರಿ. ಮೂಲತಃ ಬದಾಮಿ ಜಿಲ್ಲೆಯವಾರದ ಬಸವರಾಜ್ ಅವರು ವಿಜಯಪುರ ಸಮೀಪದ ಕವಲಗಿಯಲ್ಲಿ ಎಂಬಲ್ಲಿ ಕೇವಲ 20 ಗುಂಟೆ ಜಾಗದಲ್ಲಿ ಸಮೃದ್ಧ ಕ್ಯಾಪ್ಸಿಕಂ ಬೆಳೆದು ಇತರರಿಗೂ ಮಾದರಿಯಾಗಿದ್ದಾರೆ. ಉತ್ತಮ ಇಳುವರಿ ಜೊತೆಗೆ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.
ಬರಡು ಭೂಮಿಯಲ್ಲಿ ಬಂಗಾರದಂತ ಬೆಳೆ: ''32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಕೊನೆಗೆ ಡಿವೈಎಸ್ಪಿ ಆಗಿ ನಿವೃತ್ತಿಯಾದೆ. ನಿವೃತ್ತಿ ನಂತರ ಏನು ಮಾಡಬೇಕು ಅಂತ ಯೋಚನೆ ಮಾಡುತ್ತಿದ್ದಾಗ ತಲೆಗೆ ಹೊಳೆದಿದ್ದೇ ಕೃಷಿ ಕಾಯಕ. ಮೂಲತಃ ಕೃಷಿಕರ ಕುಟುಂಬದಲ್ಲಿ ಹುಟ್ಟಿದ್ದ ನಾನು ಇದರಲ್ಲೇ ಮುಂದುವರೆಯಬೇಕೆಂಬ ಹಠದಿಂದ ಕೃಷಿಯತ್ತ ಮುಖಮಾಡಿದೆ.
ವಿನೂತನವಾದಂತಹ ಕೃಷಿ ಮಾಡಬೇಕು ಎಂದು ಹೊರಟಾಗ ನನಗೆ ಹೊಳೆದಿದ್ದೇ ಈ ಕ್ಯಾಪ್ಸಿಕಂ ಕೃಷಿ. ಹೊಸ ತಳಿಯಾದ ಹಳದಿ ಮತ್ತು ಕೆಂಪು ಕ್ಯಾಪ್ಸಿಕಂ ಅನ್ನು ಮಹಾರಾಷ್ಟ್ರದಲ್ಲಿ ನೋಡಿದ್ದೆ. ನಾನೂ ಕೂಡ ಇದೇ ಕೃಷಿ ಮಾಡಬೇಕೆಂದುಕೊಂಡೆ. ಅದೇ ಉತ್ಸಾಹದಲ್ಲಿ ಬೆಂಗಳೂರಿನಿಂದ ಸಸಿಗಳನ್ನು ತರಿಸಿದೆ. 20 ಗುಂಟೆ ಬರಡು ಭೂಮಿಯಲ್ಲಿ ಟೆಂಟ್ ನಿರ್ಮಿಸಿ ಮಗುವಿನಂತೆ ರಕ್ಷಣೆ ಮಾಡಿ 90 ದಿನದಲ್ಲಿಯೇ ಸಮೃದ್ಧವಾದಂತಹ ಕ್ಯಾಪ್ಸಿಕಂ ಬೆಳೆದೆ. ಮೂರು ತಿಂಗಳಲ್ಲಿಯೇ ನಿರೀಕ್ಕೆಗೂ ಮೀರಿ ಇಳುವರಿ ನೀಡುತ್ತಿದೆ. ನಂಬಿಕೊಂಡ ಮಣ್ಣು ನನ್ನನ್ನು ಕೈಬಿಡಲಿಲ್ಲ. ಈಗಾಗಲೇ ಒಂದು ಲೋಡ್ ಕ್ಯಾಪ್ಸಿಕಂ ಅನ್ನ ಗೋವಾಗೆ ರಫ್ತು ಮಾಡಿದ್ದೇವೆ. ಕೆಜಿಗೆ 200 ರೂಪಾಯಿಯಂತೆ ಜನ ಖರೀದಿ ಮಾಡಿದ್ದಾರೆ. ಕೃಷಿ ಜೀವನಕ್ಕೆ ಖುಷಿ ತಂದಿದೆ. ಇನ್ನೂ ಲಾಭದ ನಿರೀಕ್ಷೆಯಲ್ಲಿದ್ದೇವೆ'' ಎನ್ನುತ್ತಾರೆ ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ್ ಚೌಕಿಮಠ.
''ಕೃಷಿ ಮಾಡಲು ಎಂದು ಹೊರಟಾಗ ಹಣದ ನೆರವು ನೀಡಿದ್ದು ಹೆಚ್ಡಿಎಫ್ಸಿ ಬ್ಯಾಂಕ್. ತಾವು ಬೆಳೆದ ಬೆಳೆ ಮತ್ತು ಬೆಳೆಯುವ ಪದ್ಧತಿ ನೋಡಿ ಬ್ಯಾಂಕ್ ಸಿಬ್ಬಂದಿಯೇ ತೋಟದವರೆಗೂ ಬಂದು ಲೋನ್ ನೀಡಿದರು. ಧನ ಸಹಾಯಕ್ಕಾಗಿ ತೋಟಗಾರಿಕೆ ಇಲಾಖೆಗೆ ಸಾಕಷ್ಟು ಬಾರಿ ಅಲೆದರೂ ಪ್ರಯೋಜನವಾಗಿರಲಿಲ್ಲ. ಸ್ವಂತ ಖರ್ಚಿನಲ್ಲಿ ಕ್ಯಾಪ್ಸಿಕಂ ಬೆಳೆ ಬೆಳೆದಿರುವ ಅನುಭವಿ ರೈತರು ಮತ್ತು ಸ್ನೇಹಿತರು ನೀಡಿದ ಮಾರ್ಗದರ್ಶನದಿಂದ ಈ ಬೆಳೆ ಬೆಳೆದೆ. ಸದ್ಯ ನಾನು ಬೆಳೆದಿರುವ ಬೆಳೆ ನೋಡಲು ಬೇರೆ ರೈತರು ಇಲ್ಲಿಗೆ ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಿದ್ದಾರೆ. ಕೃಷಿಯಲ್ಲಿ ಇನ್ನೂ ಆಳಕ್ಕೆ ಇಳಿಯುವ ಉತ್ಸಾಹ ಬಂದಿದೆ'' ಎನ್ನುತ್ತಾರೆ ಬಸವರಾಜ್.
ಇದನ್ನೂ ಓದಿ: ಯುವ ರೈತನಿಂದ ಬಹುಪದರ ಕೃಷಿ: ಎಕರೆ ಭೂಮಿಯಲ್ಲಿ 60 ಬಗೆಯ ಬೆಳೆಗಳು; ವಾರ್ಷಿಕ 8 ಲಕ್ಷ ಆದಾಯ! - Multi Layer Farming Model