ಬೆಂಗಳೂರು: ರಾಜ್ಯ ರಾಜಧಾನಿ "ಬೆಂಗಳೂರಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ. ಇದಕ್ಕೆ ಪೂರಕವಾಗಿ ಸದ್ಯದಲ್ಲೇ ಪಾಲಿಕೆ ಬಜೆಟ್ ಮಂಡನೆಯಾಗಲಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ನಗರದ ಬೆಂಗಳೂರು ವಿವಿಯ ಜ್ಞಾನಭಾರತಿ ಬಿಪಿಎಡ್ ಮೈದಾನದಲ್ಲಿ ಭಾನುವಾರ ನಡೆದ "ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರಿನ ಹೊಸ ಯೋಜನೆಗಳಿಗೆ ಸಂಪನ್ಮೂಲ ಕ್ರೋಢಿಕರಿಸಲು ನಮ್ಮದೇ ಆದ ಯೋಜನೆಗಳಿವೆ. ಬೆಂಗಳೂರಿನಲ್ಲಿ ಇನ್ಮುಂದೆ ಮೆಟ್ರೋ ಹೋಗುವ ಮಾರ್ಗದಲ್ಲಿ ಫ್ಲೈಓವರ್ ನಿರ್ಮಾಣಕ್ಕೂ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

ಯಶವಂತಪುರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಟನಲ್ ರಸ್ತೆ ಮಾಡಲು ಫಿಸಿಬಲ್ ವರದಿ ಸಿದ್ಧಪಡಿಸಲಾಗುತ್ತಿದೆ. ಸುಮ್ಮನಹಳ್ಳಿ, ಗೊರಗೊಂಟೆ ಪಾಳ್ಯ ಸೇರಿದಂತೆ ಇತರ ಕಡೆಗಳಲ್ಲಿ ಈ ಯೋಜನೆ ಮಾಡಲು ಸಿದ್ಧತೆ ಮಾಡುತ್ತಿದ್ದೇವೆ. ಇದುವರೆಗೂ 12 ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಮಾಡಿದ್ದು, 20 ಸಾವಿರ ಅಹವಾಲುಗಳು ದಾಖಲಾಗಿವೆ. ಮುಖ್ಯಮಂತ್ರಿಗಳು ಕೂಡ ಎರಡು ಬಾರಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರ ಕಾರ್ಯಕ್ರಮದಲ್ಲೂ ಸಾವಿರಾರು ಮಂದಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಅರ್ಜಿಗಳ ವಿಲೇವಾರಿಗೆ ಪ್ರತ್ಯೇಕವಾಗಿ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ ಎಂದರು.

ನಮ್ಮ ಕಾರ್ಯಕ್ರಮ ನಿಮ್ಮೆಲ್ಲರ ಕಣ್ಣಿಗೆ ಕಾಣುತ್ತಿವೆ: ಈ ಹಿಂದೆ ಇದ್ದವರ ಯೋಜನೆ, ಅಭಿವೃದ್ಧಿಯ ಆಶ್ವಾಸನೆಗಳು ಬಗ್ಗೆ ಕೇವಲ ಕಿವಿಗೆ ಕೇಳುತ್ತಿತ್ತು. ಆದರೆ ನಮ್ಮ ಕಾರ್ಯಕ್ರಮಗಳು ನಿಮ್ಮೆಲ್ಲರ ಕಣ್ಣಿಗೆ ಕಾಣುತ್ತಿವೆ. ನಮ್ಮ ಎಲ್ಲಾ ಗ್ಯಾರಂಟಿ ಯೋಜನೆಗಳು ಶೆ.95ರಷ್ಟು ಅರ್ಹ ಫಲಾನುಭವಿಗಳಿಗೆ ತಲುಪಿವೆ. 5-6% ಜನರಿಗೆ ಮಾತ್ರ ತಾಂತ್ರಿಕ ಸಮಸ್ಯೆಗಳಿಂದ ಹಣ ತಲುಪಿಲ್ಲ. ಅವರ ಸಮಸ್ಯೆ ಬಗೆಹರಿಸಲಾಗುತ್ತದೆ. ಬೆಲೆ ಏರಿಕೆ ಸಮಸ್ಯೆಗೆ ಸಿಲುಕಿರುವ ನಿಮಗೆ ಪರಿಹಾರ ನೀಡಲು ನಮ್ಮ ಸರ್ಕಾರ ಕಾರ್ಯಕ್ರಮ ರೂಪಿಸಿದೆ ಎಂದರು.

ಇನ್ನು ಬೆಂಗಳೂರಿನಲ್ಲಿರುವ ಎಲ್ಲಾ ಆಸ್ತಿಗಳನ್ನು ಸಮೀಕ್ಷೆ ಮಾಡಿಸಿ, ನಿಮ್ಮ ಮನೆ ಬಾಗಿಲಿಗೆ ಉಚಿತವಾಗಿ ದಾಖಲೆಗಳನ್ನು ತಲುಪಿಸುವ "ನಮ್ಮ ಸ್ವತ್ತು" ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದೂ ತಿಳಿಸಿದರು.
ಯಶವಂತಪುರ, ಆರ್ಆರ್ ನಗರ ನನ್ನ ಎರಡು ಕಣ್ಣುಗಳಂತೆ: ಶಾಸಕ ಎಸ್.ಟಿ ಸೋಮಶೇಖರ್ ಅವರು ಬಿಡಿಎ ಸಮಸ್ಯೆ, 110 ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಶಾಸಕ ಮುನಿರತ್ನ ಅವರು ಹೇಳಿರುವಂತೆ ಕೊಳವೆ ಬಾವಿಯನ್ನು ಇನ್ನೂ 500 ಅಡಿ ಕೊರೆಸುವ ಬಗ್ಗೆ ಬಿಡಬ್ಲ್ಯೂಎಸ್ಎಸ್ ಬಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಈ ಎರಡು ಕ್ಷೇತ್ರ ನಮಗೆ ಎರಡು ಕಣ್ಣುಗಳಂತೆ. ಇನ್ನು ಬೆಂಗಳೂರು ನಗರಕ್ಕೆ 6 ಟಿಎಂಸಿ ನೀರು ಬಳಕೆಗೆ ಆದೇಶ ಹೊರಡಿಸಲಾಗಿದೆ ಎಂದರು.

ವಾಟರ್ ಮಾಫಿಯಾ ಬಗ್ಗೆ ಪ್ರತಿಕ್ರಿಯೆ ನೀಡಿ, "ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ನೀರಿನ ಮಟ್ಟ ಕುಸಿದಿದೆ. ಕೊಳವೆ ಬಾವಿ ಇನ್ನೂ ಆಳಕ್ಕೆ ಕೊರೆಯುವ ಬಗ್ಗೆ ಸಲಹೆ ನೀಡಿದ್ದು, ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಾವು 200 ಕೋಟಿ ರೂ. ಅನುದಾನ ನೀಡಿದ್ದೇವೆ" ಎಂದು ಡಿಸಿಎಂ ತಿಳಿಸಿದರು.

ಇದನ್ನೂ ಓದಿ: ದೇಶದಲ್ಲಿ 10 ವರ್ಷದಿಂದ ಸರ್ವಾಧಿಕಾರಿ ಧೋರಣೆ ನಡೆಯತ್ತಿದೆ: ಸಂತೋಷ ಲಾಡ್ ವಾಗ್ದಾಳಿ