ದೊಡ್ಡಬಳ್ಳಾಪುರ(ಬೆಂಗಳೂರು): ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ದರ್ಶನಕ್ಕೆ ಹೋಗಿದ್ದ ಬಾಲಕಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ನಡೆದಿದೆ. ಚೇತನ (12) ಮೃತಪಟ್ಟ ಬಾಲಕಿ.
6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮೃತ ಬಾಲಕಿ, ಭಾನುವಾರ (ನಿನ್ನೆ) ಬೆಳಗ್ಗೆ ತಂದೆಯ ಜೊತೆ ಅಂಗಡಿಗೆ ತೆರಳಿದ್ದು, ಬಳಿಕ ಮನೆಗೆ ಹೋಗುವುದ್ದಾಗಿ ಹೇಳಿ ಗ್ರಾಮದಲ್ಲಿ ಕೂರಿಸಿದ್ದ ಗಣೇಶಮೂರ್ತಿ ನೋಡಲು ತೆರಳಿದ್ದಳು. ಈ ವೇಳೆ, ಬಾಲಕಿಯ ಮೇಲೆ ಅಲಂಕಾರಕ್ಕಾಗಿ ಹಾಕಲಾಗಿದ್ದ ಸೀರಿಯಲ್ ಸೆಟ್ ಬಿದ್ದು, ವಿದ್ಯುತ್ ಪ್ರವಹಿಸಿದೆ. ನಂತರ ಸ್ಥಳೀಯರು ಬಾಲಕಿಯನ್ನು ಯಲಹಂಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಇಂದು ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಘಟನೆ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಪ್ರತಿಕ್ರಿಯಿಸಿ, "ಪೊಲೀಸರು ಶಾಂತಿ ಸೌಹರ್ದ ಸಭೆಯಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ವೇಳೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಬಗ್ಗೆ ಮಾರ್ಗಸೂಚಿಗಳನ್ನು ತಿಳಿಸಿದ್ದರು. ನಿಯಮ ಉಲ್ಲಂಘನೆ ಮಾಡಿದವರ ಮಾಹಿತಿ ಇದ್ದು, ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ರಾಮನಗರದಲ್ಲಿ ಬಾಲಕಿ ಅಪಹರಣ ಯತ್ನ; ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಟ್ಟ ಜನ - Girl Kidnap Attempt