ಬೆಳಗಾವಿ: ಇವರದ್ದು ಅಪ್ಪಟ ಮರಾಠಿ ಕುಟುಂಬ. ಮಾತೃಭಾಷೆ ಮರಾಠಿ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದಿದ್ದು ಕೂಡ ಮರಾಠಿ ಮಾಧ್ಯಮದಲ್ಲೇ. ಆದರೆ, ಕನ್ನಡ ಭಾಷೆ ಮೇಲೆ ಇನ್ನಿಲ್ಲದ ನಿಷ್ಠೆ ಮತ್ತು ಪ್ರೀತಿ. ನಾಡು, ನುಡಿ ಹೋರಾಟದಲ್ಲಿ ಅನೇಕ ಬಾರಿ ಪೊಲೀಸರು ಲಾಠಿ ರುಚಿ ತೋರಿಸಿದರೂ, ವಿರೋಧಿಗಳು ಬೆದರಿಕೆಗೂ ಬಗ್ಗದೇ ಗಡಿಯಲ್ಲಿ ಕನ್ನಡ ಉಳಿಸಿ, ಬೆಳೆಸುವ ಇವರ ಕೈಂಕರ್ಯ ಮಾತ್ರ ಕಮ್ಮಿಯಾಗಿಲ್ಲ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ವೀರಕನ್ನಡಿಗನ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.
ಹೌದು, ಬೆಳಗಾವಿ ನಗರದ ಕಾಳಿ ಅಂಬ್ರಾಯಿ ಪ್ರದೇಶದ ಗಣೇಶ ಪ್ರಭಾಕರ ರೋಕಡೆ ಅವರು, ಕೆಲ ಮರಾಠಿಗರ ತೀವ್ರ ವಿರೋಧದ ನಡುವೆಯೂ ಕಳೆದ 25 ವರ್ಷಗಳಿಂದ ಗಡಿನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡುತ್ತಿರುವ ಅಪ್ರತಿಮ ಕನ್ನಡಿಗ.
ಬಿಕಾಂ ಪದವಿ ಪಡೆದಿರುವ ಗಣೇಶ ಪಿಯು ಮತ್ತು ಪದವಿ ಶಿಕ್ಷಣ ಇಂಗ್ಲಿಷ್ ಮಾಧ್ಯಮದಲ್ಲಿ ಪಡೆದರೂ, ಕನ್ನಡ ಸ್ಪಷ್ಟವಾಗಿ ಓದುವುದನ್ನು ಮತ್ತು ಬರೆಯುವುದನ್ನು ಕಲಿತಿದ್ದಾರೆ. ಕನ್ನಡ ಮೂಲದ ಅಪೂರ್ವಾ ಅವರನ್ನು ಮದುವೆ ಆಗಿರುವ ಗಣೇಶ ಅವರಿಗೆ ಶ್ರೀನಿಶಾ(15), ಪ್ರಣವ(9) ಎಂಬ ಇಬ್ಬರು ಮಕ್ಕಳಿದ್ದು, ಇವರಲ್ಲೂ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುತ್ತಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಗಣೇಶ ರೋಖಡೆ, "ನಾವು ಯಾವ ರಾಜ್ಯದಲ್ಲಿ ವಾಸಿಸುತ್ತೇವೋ, ಆ ರಾಜ್ಯ ಮತ್ತು ಅದರ ಭಾಷೆಯ ಮೇಲೆ ಅಗಾಧ ಪ್ರೀತಿ, ಅಭಿಮಾನ ಇರಬೇಕು. ದೇಶಾಭಿಮಾನದಂತೆ ರಾಜ್ಯದ ಮೇಲೂ ಪ್ರತಿಯೊಬ್ಬರಲ್ಲೂ ಅಭಿಮಾನ ಇರಲೇಬೇಕು. ಯಾಕೆಂದರೆ ಆ ರಾಜ್ಯದಲ್ಲಿ ಇರುತ್ತೇವೆ, ಅಲ್ಲಿನ ನೀರು ಕುಡಿಯುತ್ತೇವೆ, ಗಾಳಿ ಸೇವಿಸುತ್ತೇವೆ, ಇಲ್ಲಿ ಬೆಳೆದ ಆಹಾರ ಊಟ ಮಾಡುತ್ತೇವೆ. ಹಾಗಾಗಿ, ನಾವಿರುವ ನಾಡಿಗೆ ಋಣಿ ಆಗಿರುವುದು ನಮ್ಮೆಲ್ಲರ ಕರ್ತವ್ಯ" ಎಂದರು.
"ನಾನು ಅಪ್ಪಟ ಮರಾಠಿಗ. ಆದರೆ, ಬಾಲ್ಯದಿಂದಲೂ ಕನ್ನಡ ಭಾಷೆ ಮೇಲೆ ಎಲ್ಲಿಲ್ಲದ ಪ್ರೀತಿ. ವೈದ್ಯರಾಗಿದ್ದ ನಮ್ಮ ತಂದೆಗೆ ಕನ್ನಡದ ಮೇಲೆ ಅಪಾರವಾದ ಅಭಿಮಾನವಿತ್ತು. ಅದೇ ನನಗೂ ಬಳುವಳಿಯಾಗಿ ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಲ್ಲಿ ಸಕ್ರಿಯನಾಗಿದ್ದು, ನಮ್ಮ ನಾಯಕರು ಕರೆ ನೀಡುವ ಕನ್ನಡ ಹೋರಾಟಕ್ಕೆ ನಾನು ಸದಾ ಮುಂದು. ಮನೆಯಲ್ಲಿ ನಾನು ಮತ್ತು ಪತ್ನಿ ಕನ್ನಡ, ಮರಾಠಿ ಎರಡೂ ಮಾತನಾಡುತ್ತೇವೆ. ಮಕ್ಕಳು ಕೂಡ ಎರಡೂ ಭಾಷೆ ಮಾತಾಡುತ್ತಾರೆ. ಇನ್ನು ಸಂಬಂಧಿಕರಲ್ಲೂ ಕನ್ನಡ ಜಾಗೃತಿಗೊಳಿಸುತ್ತಿದ್ದೇವೆ" ಎನ್ನುತ್ತಾರೆ ಗಣೇಶ ರೋಖಡೆ.
ಮನೆ ಸುಡಲು ಬಂದರೂ ಹೆದರಲಿಲ್ಲ: "2010ರಲ್ಲಿ ಒಮ್ಮೆ ನನ್ನ ಮನೆಗೆ ಬೆಂಕಿ ಹಚ್ಚಲು 150 ಜನ ಮರಾಠಿ ಕಿಡಿಗೇಡಿಗಳ ಗುಂಪೊಂದು ಬಂದಿತ್ತು. ನೀನು ಯಾಕೆ ಕನ್ನಡ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಯಾ..? ನಿಮ್ಮ ಮನೆಯಲ್ಲಿ ಕನ್ನಡಿಗರನ್ನು ಸೇರಿಸಿ ಸಭೆ ಯಾಕೆ ಮಾಡುತ್ತಿಯಾ..? ಎಂದು ಪ್ರಶ್ನಿಸಿದರು. ಆಗ ನಾನು ಧೈರ್ಯ ಕಳೆದುಕೊಳ್ಳಲಿಲ್ಲ. ನಿಮ್ಮ ಮನೆಗೆ ಅನೇಕರು ಬರುತ್ತಾರೆ, ಅವರು ಯಾಕೆ ಬರುತ್ತಾರೆ..? ನಿಮ್ಮ ಮನೆಯಲ್ಲೂ ಯಾರನ್ನೂ ಸೇರಿಸಬೇಡಿ, ನಾಡ ವಿರೋಧಿ ಕೃತ್ಯ ಮಾಡಬೇಡಿ ಎಂದು ಮರು ಪ್ರಶ್ನಿಸಿದೆ".
"ಆಗ ಕೆರಳಿದ ಅವರು ನಿನ್ನ ಮನೆ ಸುಟ್ಟು ಬಿಡುತ್ತೇವೆ ಎಂದು ಎಚ್ಚರಿಸಿದರು. ಮನೆ ಸುಡಿ, ಆದರೆ, ನಿಮ್ಮಲ್ಲಿ ಇಬ್ಬರನ್ನಾದ್ರೂ ನಾನು ಬಲಿ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟೆ, ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಹೀಗೆ ಅನೇಕ ಬಾರಿ ಜೀವ ಬೆದರಿಕೆಗಳು ಬಂದಿವೆ. ಇನ್ನು ಅನೇಕ ಬಾರಿ ಪೊಲೀಸರು ಬಂಧಿಸಿದ್ದು, ಹಿಂಡಲಗಾ ಜೈಲಿಗೆ ಎರಡು ಬಾರಿ ಹೋಗಿ ಬಂದಿದ್ದೇನೆ. ನನ್ನ ಮೇಲೆ ಪ್ರಕರಣಗಳೂ ಇವೆ. ಆದರೆ, ಯಾವುದಕ್ಕೂ ಜಗ್ಗದೇ ಕನ್ನಡಾಂಬೆ ಸೇವೆಗೈಯ್ಯುತ್ತಿದ್ದೇನೆ" ಎಂದು ಗಣೇಶ ರೋಖಡೆ ತಮ್ಮ ಹಳೆ ನೆನಪುಗಳನ್ನು ಮೆಲಕು ಹಾಕಿದರು.
ಬೆಳಗಾವಿಯಲ್ಲಿ ಈಗ ಕನ್ನಡ ಗಟ್ಟಿಯಾಗಿದೆ: "2005ರ ಮೊದಲು ಬೆಳಗಾವಿಯಲ್ಲಿ ಮರಾಠಿ ಪ್ರಭಾವ ಜಾಸ್ತಿ ಇತ್ತು. ಆಗ ಕನ್ನಡಿಗರು ಹೊರಗೆ ಬರಲು ಭಯ ಪಡಬೇಕಿತ್ತು. ಕನ್ನಡ ಬಾವುಟ ಹಾರಿಸುವುದು ಎಂದರೆ ದೊಡ್ಡ ಸವಾಲಾಗಿತ್ತು. ಆದರೆ, ಈಗ ವಾತಾವರಣ ಸಂಪೂರ್ಣ ಬದಲಾಗಿದೆ. ಎಲ್ಲೆಲ್ಲೂ ಕನ್ನಡ ಬಾವುಟ ರಾರಾಜಿಸುತ್ತಿವೆ. ಕನ್ನಡಿಗರು ಧೈರ್ಯದಿಂದ ಹೊರ ಬರುತ್ತಿದ್ದಾರೆ. ಕರ್ನಾಟಕ ರಾಜ್ಯೋತ್ಸವದಲ್ಲಿ ಲಕ್ಷ ಲಕ್ಷ ಜನ ಸೇರುವುದನ್ನು ನೋಡಿ ತುಂಬಾ ಸಂತೋಷವಾಗುತ್ತದೆ. ಬೆಳಗಾವಿಯಲ್ಲಿ ವಾಸ್ತವವಾಗಿ ಭಾಷಾ ವಿವಾದ ಇಲ್ಲ. ಆದರೆ, ಕೆಲವೊಂದಿಷ್ಟು ಜನ ತಮ್ಮ ರಾಜಕೀಯ ಲಾಭಕ್ಕಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ನ.1ಕ್ಕೆ ಎಂಇಎಸ್ ಆಚರಿಸುತ್ತಿದ್ದ ಕರಾಳ ದಿನ ಮುಗಿದು ಹೋದ ಅಧ್ಯಾಯವಾಗಿದ್ದು, ಕನ್ನಡ-ಮರಾಠಿಗರು ಒಂದಾಗಿ ಬೆಳಗಾವಿ ಅಭಿವೃದ್ಧಿಗೆ ಒತ್ತು ನೀಡುವ ಅವಶ್ಯಕತೆ ಇದೆ" ಎನ್ನುತ್ತಾರೆ ಗಣೇಶ ರೋಖಡೆ.
ಸಮಾಜಸೇವೆಗೂ ಸೈ: ಮೂರು ಸ್ವಂತ ಆ್ಯಂಬುಲೆನ್ಸ್ ಹೊಂದಿರುವ ಗಣೇಶ ಅವರು, ಕಡಿಮೆ ದರದಲ್ಲಿ ಜನರಿಗೆ ಸೇವೆ ನೀಡುತ್ತಿದ್ದಾರೆ. ಇನ್ನು ನಗರ ವ್ಯಾಪ್ತಿಯ ಕಡು ಬಡವರಿಗೆ ಉಚಿತ ಸೇವೆ ಕಲ್ಪಿಸುತ್ತಿದ್ದಾರೆ. ಈ ಮೂಲಕ ತಾವೊಬ್ಬ ಕನ್ನಡ ಹೋರಾಟಗಾರ ಅಷ್ಟೇ ಅಲ್ಲ. ನಾನೊಬ್ಬ ಸಮಾಜಸೇವಕ ಕೂಡ ಹೌದು ಎಂಬುದನ್ನು ನಿರೂಪಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವ ಸೇವೆಗೆ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
"ನಮ್ಮ ಯಜಮಾನರು ಮರಾಠಿಗರಾದ್ರೂ ಕನ್ನಡದ ಕಟ್ಟಾಳು ಆಗಿರೋದು ನೋಡಿ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಎನಿಸುತ್ತದೆ. ಅವರು ಗಡಿಯಲ್ಲಿ ಕನ್ನಡವನ್ನು ಮತ್ತಷ್ಟು ಗಟ್ಟಿಗೊಳಿಸಲು ಶ್ರಮಿಸಲಿ, ನಾನು ಸದಾ ಅವರ ಬೆನ್ನಿಗೆ ಇರುತ್ತೇನೆ" ಎಂಬುದು ಗಣೇಶ ಪತ್ನಿ ಅಪೂರ್ವಾ ಅವರ ಅಭಿಪ್ರಾಯ.
ಇದನ್ನೂ ಓದಿ: ಹಸೆ ಚಿತ್ತಾರ ಕಲಾವಿದ ಚಂದ್ರಶೇಖರ್‌ಗೆ ರಾಜ್ಯೋತ್ಸವ ಪ್ರಶಸ್ತಿ
ಇದನ್ನೂ ಓದಿ: ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪುರಗೆ ರಾಜ್ಯೋತ್ಸವ ಪ್ರಶಸ್ತಿ ಗರಿ
ಇದನ್ನೂ ಓದಿ: ರಾಜ್ಯೋತ್ಸವದಂದು ಕರಾಳ ದಿನಾಚರಣೆ ಪ್ರಶ್ನಿಸಿ ಅರ್ಜಿ: ಸರ್ಕಾರ, ಎಂಇಎಸ್ಗೆ ಹೈಕೋರ್ಟ್ ನೋಟಿಸ್