ಶಿವಮೊಗ್ಗ: ಕೇರಳದ ವಯನಾಡ್‌ನಲ್ಲಿ ಭಾರೀ ಮಳೆಯಿಂದ ಸಂಭವಿಸಿದ ಭೀಕರ ಭೂಕುಸಿತದಿಂದ ಹಾನಿಗೊಳಗಾದ ಸಂತ್ರಸ್ತರ ನೆರವಿಗಾಗಿ 9ನೇ ತರಗತಿಯ ವಿದ್ಯಾರ್ಥಿನಿ, ರಾಷ್ಟ್ರೀಯ ಮಟ್ಟದ ಕಬಡ್ಡಿಪಟು ಶ್ರೇಯಾ ಹಾಗೂ ಆಕೆಯ ಸಹೋದರ ಶ್ರವಂತ್ 15,000 ರೂ ದೇಣಿಗೆ ನೀಡಿದ್ದಾರೆ.
ಶ್ರೇಯಾ ರಾಜ್ಯ ಮಟ್ಟದಿಂದ ರಾಷ್ಟ್ರಮಟ್ಟದ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದರು. ರಾಜ್ಯ ಸರ್ಕಾರ 10,000 ಕ್ರೀಡಾ ವಿದ್ಯಾರ್ಥಿವೇತನ ನೀಡಿತ್ತು. ವಯನಾಡ್ ದುರಂತ ಕಂಡು ಅಲ್ಲಿನ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಶ್ರೇಯಾ ತನಗೆ ಬಂದ ಕ್ರೀಡಾ ವಿದ್ಯಾರ್ಥಿವೇತನ ದೇಣಿಗೆ ನೀಡಲು ಮುಂದಾಗಿದ್ದಾರೆ. ಇದರಿಂದ ಪ್ರೇರಣೆಗೊಂಡ ಶ್ರೇಯಾ ಅಣ್ಣ ಶ್ರವಂತ್ ಕೂಡ ತನ್ನ ಉಳಿತಾಯದ 5 ಸಾವಿರ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಲು ನಿರ್ಧರಿಸಿದ್ದಾರೆ.
ಬಳಿಕ ರಿಪ್ಪನ್ಪೇಟೆಯ ನಾಡಕಚೇರಿಗೆ ತೆರಳಿ ಹೊಸನಗರ ತಹಶೀಲ್ದಾರ್ ರಶ್ಮಿ ಅವರ ಮೂಲಕ ವಯನಾಡ್ ಸಂತ್ರಸ್ತರ ನಿಧಿಗೆ ದೇಣಿಗೆ ನೀಡಿದ್ದಾರೆ. ಶ್ರೇಯಾ ಹಾಗೂ ಶ್ರವಂತ್ ರಿಪ್ಪನ್ಪೇಟೆಯ ಸವಿತಾ ಮತ್ತು ರಾಘವೇಂದ್ರ ದಂಪತಿ ಮಕ್ಕಳಾಗಿದ್ದಾರೆ.
ಈ ಕುರಿತು ವಿದ್ಯಾರ್ಥಿನಿ ಶ್ರೇಯಾ ಮಾತನಾಡಿ, "ವಯನಾಡ್‌ನ ಭೂಕುಸಿತ ದುರಂತದಲ್ಲಿ ಸಂತ್ರಸ್ತರು ಅಪಾರ ಪ್ರಮಾಣದ ಮನೆ, ಆಸ್ತಿ ಕಳೆದುಕೊಂಡಿದ್ದಾರೆ. ಇದನ್ನು ಮಾಧ್ಯಮಗಳ ಮೂಲಕ ಗಮನಿಸಿದೆ. ನಂತರ ಸಂತ್ರಸ್ತರಿಗೆ ಹಣ ನೀಡುವ ಬಗ್ಗೆ ಪೋಷಕರ ಜೊತೆ ಮಾತನಾಡಿದೆ. ಈ ವೇಳೆ ನನ್ನ ಅಣ್ಣನೂ ಕೂಡ ಹಣ ಕೊಡುವುದಾಗಿ ಹೇಳಿದರು. ಇಬ್ಬರೂ ಸೇರಿ ತಹಶೀಲ್ದಾರ್ ಅವರಿಗೆ 15 ಸಾವಿರ ರೂ ನೀಡಿದ್ದೇವೆ" ಎಂದು ತಿಳಿಸಿದರು.
ದೈಹಿಕ ಶಿಕ್ಷಕ ವಿನಯ್ ಮಾತನಾಡಿ, "ವಿದ್ಯಾರ್ಥಿ ಶ್ರೇಯಾ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಹೀಗಾಗಿ ರಾಜ್ಯ ಸರ್ಕಾರ 10 ಸಾವಿರ ರೂ ಸ್ಕಾಲರ್ಶಿಪ್ ನೀಡಿತ್ತು. ಶ್ರೇಯಾ ಈ ಹಣವನ್ನು ವಯನಾಡ್‌ನ ಸಂತ್ರಸ್ತರಿಗೆ ನೀಡಿದ್ದಾರೆ. ಅವರಿಗೆ ಶಿಕ್ಷಕರು, ಗ್ರಾಮಸ್ಥರ ಪರವಾಗಿ ಧನ್ಯವಾದ ತಿಳಿಸುತ್ತೇನೆ" ಎಂದರು.
ಪಿಎಸ್‌ಐ ಪ್ರವೀಣ್, ಉಪ ತಹಶೀಲ್ದಾರ್ ಹುಚ್ಚರಾಯಪ್ಪ ಸೇರಿದಂತೆ ಇತರರು ಈ ವೇಳೆ ಉಪಸ್ಥಿತರಿದ್ದರು.