ಬೆಳಗಾವಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 50 ನೂತನ ಬಸ್‌ಗಳ ಲೋಕಾರ್ಪಣೆ ಮತ್ತು ಅಪಘಾತ ರಹಿತ 5 ವರ್ಷಗಳ ವಾಹನ ಚಾಲನೆ ಮಾಡಿದ 38 ಬಸ್ ಚಾಲಕರಿಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ ನೀಡಿ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸನ್ಮಾನಿಸಿದರು. ಭಾನುವಾರ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಿತು. ಜೊತೆಗೆ ಹಾರೂಗೇರಿ ನೂತನ ಬಸ್ ನಿಲ್ದಾಣದ ಉದ್ಘಾಟನೆಯನ್ನು ಮಾಡಲಾಯಿತು.
ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ರಾಜ್ಯದಲ್ಲಿ ನೂತನ ಬಸ್‌ಗಳ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದ್ದು, 2 ಸಾವಿರಕ್ಕಿಂತಲೂ ಅಧಿಕ ವಾಹನ ಚಾಲಕರ ಹಾಗೂ ನಿರ್ವಾಹಕರ ಹುದ್ದೆಗಳ ಭರ್ತಿ ಪ್ರಕ್ರಿಯೆ ಕೂಡ ಚಾಲನೆಯಲ್ಲಿದೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿ ಬಸ್ ಸಂಚಾರ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಬಸ್ ನಿಲ್ದಾಣಗಳ ಕೊರತೆ ಇಲ್ಲ. ಸಾರಿಗೆ ಇಲಾಖೆಯನ್ನು ಇನ್ನಷ್ಟು ಬಲಪಡಿಸಿ, ಗ್ರಾಮೀಣ ಭಾಗದ ಸಾರಿಗೆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ಗಮನಹರಿಸಲಿದೆ. ಮುಂದಿನ 3 ತಿಂಗಳಲ್ಲಿ ಹೆಚ್ಚುವರಿ ಬಸ್ ಸಂಚಾರ ಕಾರ್ಯಾಚರಣೆ ಕೈಗೊಂಡು ಸಂಚಾರ ವ್ಯವಸ್ಥೆ ಸುಧಾರಣೆಗೆ ತರಲಾಗುವುದು. ಅಪಘಾತಗಳಲ್ಲಿ ಮೃತರಾದ ಬಸ್ ಚಾಲಕರಿಗೆ, ಕಂಡಕ್ಟರ್ಗಳ ಕುಟುಂಬಸ್ಥರಿಗೆ 50 ಲಕ್ಷ ರೂಪಾಯಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಪರಿಹಾರ ಧನವನ್ನು 1 ಕೋಟಿಗೆ ಹೆಚ್ಚಿಸುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಮಾತನಾಡಿ, ನಮಗೆ ಹಳ್ಳಿಯಲ್ಲಿ ಸಮಸ್ಯೆ ಇರೋದು. ಶಾಲಾ ಮಕ್ಕಳಿಗೆ ಸರಿಯಾಗಿ ಬಸ್ ಸಿಗುತ್ತಿಲ್ಲ. ನಾನು ಈ ಸಂಸ್ಥೆಗೆ ಅಧ್ಯಕ್ಷನಾಗಿ ಕೇವಲ 15 ದಿನ ಆಗಿದೆ. ಚಾಲಕ ನಿರ್ವಾಹಕರ ಸಮಸ್ಯೆಗಳು ನನ್ನ ಗಮನಕ್ಕೆ ಬರುತ್ತಿವೆ. ಪ್ರಾರಂಭಿಕ ಹಂತದಲ್ಲಿ ನಾವು ತೊಂದರೆ ಅನುಭವಿಸಬೇಕಾಗುತ್ತದೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಹಂತ ಹಂತವಾಗಿ ಮಾಡುತ್ತೇವೆ. ಎಲ್ಲರೂ ಒಟ್ಟಿಗೆ ಕೂಡಿ ಈ ಸಂಸ್ಥೆಯನ್ನು ನಡೆಸೋಣ ಎಂದು ಹೇಳಿದರು.
ಗ್ರಾಮೀಣ ಭಾಗಕ್ಕೂ ಹೊಸ ಬಸ್ ಬಿಡಿ : ರಾಮದುರ್ಗ ಶಾಸಕ ಅಶೋಕ ಪಟ್ಟಣ ಮಾತನಾಡಿ, ಮಾರ್ಗ ಮಧ್ಯೆ ಬಸ್ ಕೆಟ್ಟು ನಿಂತರೆ ಗ್ರಾಮೀಣ ಭಾಗದ ಜನ ಹಿಡಿಶಾಪ ಹಾಕುತ್ತಾರೆ. ಈ ಕಾರಣಕ್ಕೆ ಗ್ರಾಮೀಣ ಭಾಗಕ್ಕೂ ಹೊಸ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ವೇದಿಕೆ ಮೇಲೆಯೇ ಸಚಿವ ರಾಮಲಿಂಗಾರೆಡ್ಡಿಗೆ ಮನವಿ ಮಾಡಿಕೊಂಡರು. ನೂತನ ಬಸ್‌ಗಳ ಸೇವೆ ನಗರ ಪ್ರದೇಶಗಳಿಗೆ ಮಾತ್ರ ಕೊಡುತ್ತೀರಾ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಗ್ರಾಮೀಣ ಭಾಗಕ್ಕೂ ಹೊಸ ಬಸ್ ಬಿಡಿ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಆಸೀಫ್ ಸೇಠ್, ಬಾಬಾಸಾಹೇಬ್ ಪಾಟೀಲ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಭರತ.ಎಸ್, ಬೆಳಗಾವಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಥೋಡ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ : ಬಾಲರಾಮನ ದರ್ಶನಕ್ಕೆ ಮೈಸೂರಿನಿಂದ ಹೊರಟ ಭಕ್ತರು