ಬೆಂಗಳೂರು: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕಳೆದ ಶನಿವಾರ (ಮಾ.16) ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 29 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ, 2,541 ಕೋಟಿ ರೂ ಪರಿಹಾರ ಕೊಡಿಸಿರುವುದಾಗಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಕೆ.ಸೋಮಶೇಖರ್ ತಿಳಿಸಿದ್ದಾರೆ.
ಹೈಕೋರ್ಟ್ ಕಟ್ಟಡದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್ಗೆ 3,76,577 ಪ್ರಕರಣಗಳು ಶಿಫಾರಸು ಆಗಿದ್ದವು. ಅವುಗಳ ಪೈಕಿ ನ್ಯಾಯಾಲಯದಲ್ಲಿ ಬಾಕಿಯಿದ್ದ 2,52,277 ಮತ್ತು ವ್ಯಾಜ್ಯ ಪೂರ್ವ 26,48,035 ಸೇರಿದಂತೆ ಒಟ್ಟು 29,00,312 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಹೈಕೋರ್ಟ್ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳು ಸೇರಿ ರಾಜ್ಯಾದ್ಯಂತ ಒಟ್ಟು 1,041 ನ್ಯಾಯಪೀಠಗಳು ಅದಾಲತ್‌ನಲ್ಲಿ ಕಾರ್ಯ ನಿರ್ವಹಿಸಿದ್ದವು ಎಂದು ಮಾಹಿತಿ ನೀಡಿದರು.
ಅಲ್ಲದೇ, 771 ವೈವಾಹಿಕ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಿ, 281 ದಂಪತಿಗಳನ್ನು ಜೊತೆಗೂಡಿಸಲಾಗಿದೆ. 4,853 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳನ್ನು ಇತ್ಯರ್ಥಪಡಿಸಿ, 249 ಕೋಟಿ ರೂ ಪರಿಹಾರ ಕೊಡಿಸಲಾಗಿದೆ. ಹಾಗೆಯೇ, 12,563 ಚೆಕ್ ಬೌನ್ಸ್, 3,689 ವಿಭಾಗ ದಾವೆ ವಿಲೇವಾರಿ ಮಾಡಲಾಗಿದೆ. 281 ಭೂ ಸ್ವಾಧೀನ ಅಮಲ್ದಾರಿ ಪ್ರಕರಣಗಳನ್ನು ಇತ್ಯರ್ಥಪಡಿಸಿ, 114 ಕೋಟಿ ರೂ ಪರಿಹಾರ ಕೊಡಿಸಲಾಗಿದೆ ಎಂದು ವಿವರಿಸಿದರು.
ಜತೆಗೆ, 967 ಮೋಟಾರು ಅಪಘಾತ ಅಮಲ್ಜಾರಿ ಪ್ರಕರಣಗಳನ್ನು ಇತ್ಯರ್ಥಪಡಿಸಿ, 62 ಕೋಟಿ ರೂ ಪರಿಹಾರ ಕೊಡಿಸಲಾಗಿದೆ. 4,435 ಇತರ ಅಮಲ್ಜಾರಿ ಪ್ರಕರಣಗಳನ್ನು ವಿಲೇವಾರಿ ಮಾಡಿ 181 ಕೋಟಿ ರೂ, 49 ರೇರಾ ಕೇಸುಗಳನ್ನು ವಿಲೇವಾರಿ ಮಾಡಿ 1.32 ಕೋಟಿ ರೂ ಮತ್ತು 113 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳನ್ನು ಇತ್ಯರ್ಥಪಡಿಸಿ, 3.23 ಕೋಟಿ ಪರಿಹಾರ ಕೊಡಿಸಲಾಗಿದೆ ಎಂದು ತಿಳಿಸಿದರು.
ಬಾಕಿ ಪ್ರಕರಣಗಳು: ರಾಜ್ಯದ ಎಲ್ಲ ಕೋರ್ಟ್ನಲ್ಲಿ 2024ರ ಮಾ.1ರ ವೇಳೆಗೆ ಒಟ್ಟು 20,43,999 ಪ್ರಕರಣಗಳು ವಿಲೇವಾರಿಗೆ ಬಾಕಿಯಿವೆ. ಅವುಗಳ ಪೈಕಿ ಹೈಕೋರ್ಟ್ನಲ್ಲಿ 2,82,870 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದೆ. ಬೆಂಗಳೂರು ಪೀಠದಲ್ಲಿ1,75,41 ಧಾರವಾಡ ಪೀಠದಲ್ಲಿ61,630 ಮತ್ತು ಕಲಬುರಗಿ ಪೀಠದಲ್ಲಿ 26, 199 ಪ್ರಕರಣಗಳು ವಿಲೇವಾರಿ ಬಾಕಿ ಇವೆ. ಪ್ರತಿ ವರ್ಷ ನಾಲ್ಕು ಬಾರಿ ಲೋಕ ಅದಾಲತ್ ನಡೆಯಲಿದೆ. ರಾಜಿ ಸಂಧಾನದ ಮೂಲಕ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತ, ಖರ್ಚು ಇಲ್ಲದೇ ಮತ್ತು ಸಕಾಲಕ್ಕೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ನ್ಯಾಯ ಪಡೆಯಲು ಲೋಕ ಅದಾಲತ್ ಉತ್ತಮ ವೇದಿಕೆಯಾಗಿದೆ ಎಂದು ನ್ಯಾಯಮೂರ್ತಿಗಳು ವಿವರಿಸಿದರು.
ಅದಾಲತ್‌ನ ಪ್ರಮುಖ ಅಂಶಗಳು :
- ಧಾರವಾಡ ಪ್ರಧಾನ ಹಿರಿಯ ನ್ಯಾಯಾಧೀಶರ ನ್ಯಾಯಾಲಯದಲ್ಲಿದ್ದ ಮೂಲದಾವೆ ಪ್ರಕರಣವನ್ನು 6 ಕೋಟಿ ರೂ. ಮೊತ್ತಕ್ಕೆ ಇತ್ಯರ್ಥ
- ಮಂಗಳೂರಿನ ಅಪರ ಜಿಲ್ಲಾ ನ್ಯಾಯಾಲಯವು ವಾಣಿಜ್ಯ ಪ್ರಕರಣವೊಂದನ್ನು 2.14 ಕೋಟಿ ರೂ ಗೆ ಇತ್ಯರ್ಥ.
- ಧಾರವಾಡ ಪ್ರಧಾನ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯವು ೨ ಕೋಟಿ ರು. ಮೊತ್ತಕ್ಕೆ ಮೋಟಾರು ವಾಹನ ಪ್ರಕರಣ ಇತ್ಯರ್ಥ.
- ಮಂಡ್ಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯವು ಶ್ರೀರಂಗಪಟ್ಟಣದ ಎಂವಿಸಿ ಪ್ರಕರಣವೊಂದನ್ನು 50 ಲಕ್ಷ ರೂ ಗೆ ಇತ್ಯರ್ಥ.
- ಧಾರವಾಡದ ಔದ್ಯೋಗಿಕ ನ್ಯಾಯಾಲಯವು ಹುಬ್ಬಳ್ಳಿಯ ಟಾಟಾ ಮಾರ್ಕೋಪೋಲೋ ಕಂಪನಿಯ 200 ಕಾರ್ಮಿಕರನ್ನು ಪುನಃ ಸೇವೆಗೆ ತೆಗೆದುಕೊಳ್ಳಲು ಆದೇಶಿಸಿದೆ.
- ಚಿಕ್ಕಮಗಳೂರಿನ ಮೂಡಿಗೆರೆಯ ಹಿರಿಯ ಸಿವಿಲ್ ಮತ್ತು ಜೆಎಫ್‌ಎಂಸಿ ನ್ಯಾಯಾಲಯದಲ್ಲಿ 20 ವರ್ಷದ ಹಳೆಯ ಪ್ರಕರಣದ ಇತ್ಯರ್ಥ.
- ಮಂಡ್ಯ ಪ್ರಧಾನ ಸಿವಿಲ್ ನ್ಯಾಯಾಲಯ, ಶ್ರೀರಂಗಪಟ್ಟಣದ ಹತ್ತು ವರ್ಷ ಹಳೆಯದ ಅಮಲ್ಜಾರಿ ಹಾಗೂ ಸಿಜೆ - ಜೆಎಂಎಫ್ಸಿ ನ್ಯಾಯಾಲಯವು ಪಾಂಡವಪುರದ ಹತ್ತು ವರ್ಷದ ಹಳೆಯ ವಿಭಾಗ ಪ್ರಕರಣವನ್ನು ಇತ್ಯರ್ಥಪಡಿಸಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಪಾದರಾಯನಪುರ ಗಲಭೆ ಪ್ರಕರಣ; ಆರೋಪಿಗಳ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್