ಬೆಂಗಳೂರು: ಆಡಳಿತ ಯಂತ್ರಕ್ಕೆ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಬೆಂಗಳೂರು ಗ್ರಾಮಾಂತರ ಡಿಸಿ ಹಾಗೂ ಬೆಸ್ಕಾಂ ಎಂಡಿ ಸೇರಿ ಒಟ್ಟು 12 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಡಾ. ಶಿವಶಂಕರ್ ಎನ್. ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರನ್ನು ಕೂಡಲೇ ಜಾರಿಗೆ ಬರುವಂತೆ ಬೆಸ್ಕಾಂ ಎಂಡಿಯಾಗಿ ವರ್ಗಾವಣೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಡಿಸಿಯಾಗಿ ಅನುರಾಧ ಕೆ. ಎನ್. ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಇತ್ತ ಬೆಸ್ಕಾಂ ಎಂಡಿಯಾಗಿದ್ದ ಮಹಾಂತೇಶ್ ಬಿಳಗಿ ಅವರನ್ನು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಎಂಡಿಯಾಗಿ ವರ್ಗಾಯಿಸಿದೆ.
ಉಳಿದಂತೆ ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪಾ ಟಿ. ಕೆ., ಶೇಖ್ ತನ್ವೀರ್ ಆಸಿಫ್, ಜಯವಿಭವಸ್ವಾಮಿ, ಆಷಾದ್ ಉರ್ ರೆಹಮಾನ್ ಶರೀಫ್, ದಿಗ್ವಿಜಯ್ ಬೋಡ್ಕೆ, ಭುವನೇಶ್ ದೇವಿದಾಸ್, ಅನ್ಮೋಲ್ ಜೈನ್, ಶಿಂಧೆ ಅವಿನಾಶ್ ಹಾಗೂ ಜುಬಿನ್ ಮೊಹಾಪಾತ್ರ ಅವರನ್ನು ವರ್ಗಾವಣೆ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ವರ್ಗಾವಣೆ- ಸ್ಮಾರ್ಟ್ ಸಿಟಿ ಎಂಡಿ ಡಾ.ರುದ್ರೇಶ್ ಗಾಳಿ ನೇಮಕ: ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ನೂತನ ಆಯುಕ್ತರನ್ನಾಗಿ ಡಾ.ರುದ್ರೇಶ್ ಗಾಳಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಡಾ.ರುದ್ರೇಶ್ ಗಾಳಿ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಆಯುಕ್ತ ಹುದ್ದೆಯಲ್ಲಿದ್ದ ಡಾ.ಈಶ್ವರ ಉಳ್ಳಾಗಡ್ಡಿ ಅವರನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. 2023ರ ಜುಲೈ 7ರಿಂದ ಇವರಿದ್ದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ 2024-25 ಸತತ ಎರಡು ಆರ್ಥಿಕ ವರ್ಷದಲ್ಲಿ ಪಾಲಿಕೆಯು ಆಸ್ತಿ ತೆರಿಗೆ ಸಂಗ್ರಹದಲ್ಲಿ 100 ಕೋಟಿ ರೂಪಾಯಿ ಗಡಿ ದಾಟಿದೆ.
ಅವಳಿನಗರದಲ್ಲಿ ಆಸ್ತಿ ಕರ ಪಾವತಿಸುವ ವ್ಯವಸ್ಥೆಯನ್ನು ಸರಳೀಕರಣಗೊಳಿಸಿದ್ದರು. ಇ-ಸ್ವತ್ತು, ಇ-ಖಾತಾ ಹಾಗೂ ಕರ ಪಾವತಿಗೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದಷ್ಟೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವರಣದಲ್ಲಿ ಆಸ್ತಿ ಮೇಳ, ಇ-ಸ್ವತ್ತು ಮೇಳಕ್ಕೆ ಚಾಲನೆ ಕೊಡಿಸಿದ್ದರು. ಈ ಡಾ. ಈಶ್ವರ ಉಳ್ಳಾಗಡ್ಡಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡಿದ್ದರು. ತನ್ಮೂಲಕ ಪಾಲಿಕೆಯ ಒಟ್ಟಾರೆ ಆಸ್ತಿ ತೆರಿಗೆ ಆದಾಯವನ್ನು 400 ಕೋಟಿ ರೂಪಾಯಿಗೆ ಹೆಚ್ಚಿಸುವ ಗುರಿ ಹೊಂದಿದ್ದರು.
ಆಸ್ತಿಗಳ ಜಿಪಿಎಸ್ ಸರ್ವೇ ಮಾಡಿಸುವ ಯೋಜನೆಯನ್ನೂ ಇವರು ಕೈಗೆತ್ತಿಕೊಂಡಿದ್ದರು. ಈ ಮೂಲಕ ಪಾಲಿಕೆಯ ದಾಖಲೆಯಲ್ಲಿ ಇರದ ಅನಧಿಕೃತ ಕಟ್ಟಡ, ಜಾಗಗಳಿಗೂ ಕರ ನಿಗದಿಪಡಿಸಿ ಪಾಲಿಕೆಯ ಆದಾಯ ಹೆಚ್ಚಿಸುವ ಯೋಜನೆ ರೂಪಿಸಿದ್ದರು. ಇದೀಗ ಈ ಎಲ್ಲ ಕಾರ್ಯಗಳನ್ನು ನೂತನ ಆಯುಕ್ತ ಡಾ. ರುದ್ರೇಶ್ ಗಾಳಿ ಅವರು ಮುಂದುವರಿಸಬೇಕಿದೆ. ಡಾ.ರುದ್ರೇಶ್ ಗಾಳಿಯವರು ಕೂಡ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ ಕೆಲಸ ಮಾಡಿದ್ದಾರೆ. ಇದೀಗ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಎಂಡಿಯಾಗಿದ್ದರಿಂದ ಅವಳಿ ನಗರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದ್ದಾರೆ.
ಇದನ್ನೂ ಓದಿ: ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಲು ಸಾಲದ ಮೊರೆ: ಕೊನೆ ತ್ರೈಮಾಸಿಕದಲ್ಲಿ ₹48,000 ಕೋಟಿ ಸಾಲ ಎತ್ತುವಳಿಗೆ ನಿರ್ಧಾರ