ಹೈದರಾಬಾದ್: ಭಾರತ ಮತ್ತು ಕೆನಡಾ ನಡುವಿನ ನಿನ್ನೆಯ (ಶನಿವಾರ) ಪಂದ್ಯ ಟಾಸ್ ಕಾಣದೆ ರದ್ದಾಯಿತು. ಪಂದ್ಯಾರಂಭಕ್ಕೂ ಮುನ್ನ ಸುರಿದ ಮಳೆಯಿಂದಾಗಿ ಅಮೆರಿಕದ ಫ್ಲೋರಿಡಾದ ಇಡೀ ಮೈದಾನ ಒದ್ದೆಯಾಗಿತ್ತು. ಪಂದ್ಯ ನಡೆಸಲು ಒಂದೂವರೆ ಗಂಟೆ ಕಾಯಲಾಗಿತ್ತು. ಆದಾಗ್ಯೂ, ಅಂಪೈರ್ಗಳು ಎರಡು ಬಾರಿ ಫೀಲ್ಡ್ ಪರಿಶೀಲಿಸಿ ಅಂತಿಮವಾಗಿ ಪಂದ್ಯ ರದ್ದುಗೊಳಿಸುವ ತೀರ್ಮಾನ ಕೈಗೊಂಡರು.
ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ನೀಡಲಾಗಿದೆ. ಈಗಾಗಲೇ ಟೀಂ ಇಂಡಿಯಾ ಗ್ರೂಪ್ ಹಂತದ ಪಂದ್ಯಗಳಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು ಸೂಪರ್ 8ಗೆ ಪ್ರವೇಶಿಸಿದೆ. ಕೆನಡಾ 3 ಪಂದ್ಯಗಳ ಪೈಕಿ 1ರಲ್ಲಿ ಮಾತ್ರ ಗೆದ್ದು ಲೀಗ್ನಿಂದ ಹೊರಬಿದ್ದಿದೆ. ಹಾಗಾಗಿ ಎರಡೂ ತಂಡಗಳಿಗೆ ಇದು ಕೇವಲ ಔಪಚಾರಿಕ ಪಂದ್ಯವಷ್ಟೇ ಆಗಿತ್ತು.
ಸೂಪರ್-8, ಅಫ್ಘಾನಿಸ್ತಾನ vs ಭಾರತ: ಸೂಪರ್-8 ಹಂತದಲ್ಲಿ ಭಾರತ ಜೂ.20ರಂದು ಬಾರ್ಬಡೋಸ್‌ನಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಜೂ.22ರಂದು ಆಂಟಿಗುವಾದಲ್ಲಿ, ಬಾಂಗ್ಲಾದೇಶ/ನೆದರ್ಲ್ಯಾಂಡ್ಸ್ ತಂಡಗಳಲ್ಲಿ ಒಂದನ್ನು ಎದುರಿಸಲಿದೆ. ಜೂ.24ರಂದು ಸೇಂಟ್ ಲೂಸಿಯಾದಲ್ಲಿ ಆಸ್ಟ್ರೇಲಿಯಾದೊಂದಿಗೆ ಸೆಣಸಲಿದೆ.
ಗ್ರೂಪ್ A ಅಂಕ ಪಟ್ಟಿ ಹೀಗಿದೆ: ಗ್ರೂಪ್-ಎ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ 7 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದೇ ಗ್ರೂಪ್ನಲ್ಲಿರುವ ಅಮೆರಿಕ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ಸೂಪರ್ 8ಕ್ಕೆ ಲಗ್ಗೆಯಿಟ್ಟಿದೆ. ಸದ್ಯ 5 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಅಮೆರಿಕ ತಂಡವು ಪಾಕಿಸ್ತಾನ ಮತ್ತು ಕೆನಡಾವನ್ನು ಸೋಲಿಸಿತ್ತು. ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿದ್ದು ಒಂದು ಅಂಕ ಪಡೆದು ಸೂಪರ್ 8ಗೆ ಅರ್ಹತೆ ಪಡೆದಿದೆ. ಇದರ ನಂತರದ ಸ್ಥಾನಗಳಲ್ಲಿ ಕೆನಡಾ, ಪಾಕಿಸ್ತಾನ ಮತ್ತು ಐರ್ಲೆಂಡ್ ತಂಡಗಳಿವೆ.
ಇದನ್ನೂ ಓದಿ: 'ತಂಡವೊಂದು ಮೂರು ಬಾಗಿಲು': ಪಾಕಿಸ್ತಾನ ತಂಡದಲ್ಲಿ ಗುಂಪು ಗುದ್ದಾಟವೇ ವಿಶ್ವಕಪ್ ಸೋಲಿಗೆ ಕಾರಣ? - Pakistan cricket team