ಗಾಲೆ(ಶ್ರೀಲಂಕಾ): ನ್ಯೂಜಿಲೆಂಡ್ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಶ್ರೀಲಂಕಾ ಸರಣಿ ಗೆದ್ದುಕೊಂಡಿದೆ. 15 ವರ್ಷಗಳ ಬಳಿಕ ಲಂಕನ್ನರು ಕಿವೀಸ್ ವಿರುದ್ಧ ಗೆಲುವು ಸಾಧಿಸಿದರು.
ಗಾಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದದಲ್ಲಿ ಸಿಂಹಳೀಯರು ಅದ್ಭುತ ಪ್ರದರ್ಶನ ತೋರಿದರು. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ನಾಯಕ ಧನಂಜಯ ಡಿ ಸಿಲ್ವಾ ಮೊದಲಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ, ಮೊದಲ ಇನ್ನಿಂಗ್ಸ್‌ನಲ್ಲಿ ಲಂಕಾ ಬ್ಯಾಟರ್‌ಗಳು ಅತ್ಯುತ್ತಮ ಪ್ರದರ್ಶನ ತೋರಿದರು. ದಿನೇಶ್ ಚಂಡಿಮಾಲ್ (116), ಏಂಜೆಲೊ ಮ್ಯಾಥ್ಯೂಸ್ (88) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ಕಮಿಂದು ಮೆಂಡಿಸ್ ಅಜೇಯವಾಗಿ 182 ರನ್ಗಳಿಸಿದರು. ಉಳಿದಂತೆ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ಕೂಡ (106) ಶತಕ ಸಿಡಿಸಿದರು. ಇದರಿಂದಾಗಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 602 ರನ್ಗಳ ಬೃಹತ್ ಮೊತ್ತ ಪೇರಿಸಿತು.
Sri Lanka clinch the series in style! 🏆🇱🇰 #SLvNZ
— Sri Lanka Cricket 🇱🇰 (@OfficialSLC) September 29, 2024
Dominant performance sees them win the second Test by an innings and 154 runs, taking the series 2-0.
Congratulations to the team on a fantastic series win! 🎉 pic.twitter.com/XbbAdlvo7k
ಎರಡಂಕಿಗೆ ಕಿವೀಸ್ ಸರ್ವಪತನ: ಇದಕ್ಕುತ್ತರವಾಗಿ ಕಿವೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 88 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ತಂಡದ ಪರ ಯಾವೊಬ್ಬ ಬ್ಯಾಟರ್ ಅರ್ಧಶತಕ ಗಳಿಸಲು ಸಾಧ್ಯವಾಗದೇ ಪೆವಿಲಿಯನ್ ಸೇರಿದರು.
ಇದರೊಂದಿಗೆ 514 ರನ್ಗಳ ಹಿನ್ನಡೆ ಸಾಧಿಸಿದ್ದ ಕಿವೀಸ್ ಮೇಲೆ ಲಂಕನ್ನರು ಫಾಲೋಆನ್ ಹೇರಿದರು. ಅದರಂತೆ, ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಪರ ಡೆವೋನ್ ಕಾನ್ವೆ (61) ಮತ್ತು ವಿಯಮ್ಸನ್ (46) ಉತ್ತಮ ಇನ್ನಿಂಗ್ಸ್ ಆಡಿದರೆ, ಮಧ್ಯಮ ಕ್ರಮಾಂಕದಲ್ಲಿ ಟಾಮ್ ಬ್ಲಂಡೆ (60), ಗ್ಲೆನ್ ಫಿಲಿಫ್ (78), ಮಿಚೆಲ್ ಸ್ಯಾಂಟ್ನರ್ (67) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಟಾಮ್ ಮತ್ತು ಗ್ಲೆನ್ ಫಿಲಿಪ್ ಕೆಲಕಾಲ ಕ್ರೀಸ್ನಲ್ಲಿ ಗಟ್ಟಿ ನೆಲೆಯೂರಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಈ ಇಬ್ಬರು ಪೆವಿಲಿಯನ್ ಸೇರುತ್ತಿದ್ದಂತೆ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಲಂಕನ್ನರು ಬ್ಯಾಕ್ ಟು ಬ್ಯಾಕ್ ವಿಕೆಟ್ಗಳನ್ನು ಉರುಳಿಸಿದರು. ಇದರಿಂದಾಗಿ ಶ್ರೀಲಂಕಾ ಇನ್ನಿಂಗ್ಸ್ ಸಮೇತ 154 ರನ್‌ಗಳಿಂದ ಪಂದ್ಯ ಗೆದ್ದುಕೊಂಡಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಲಂಕಾ ಪರ ಪ್ರಭಾತ್ ಜಯಸೂರ್ಯ 6 ವಿಕೆಟ್ಗಳನ್ನು ಪಡೆದು ಮಿಂಚಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ನಿಶಾನ್ ಪಿರಿಸ್ 6 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ: ಕ್ರಿಕೆಟ್ ಪಂದ್ಯದ ವೇಳೆ ಮೈದಾನ ಪ್ರವೇಶಿಸಿದ ಶ್ವಾನ: ಫನ್ನಿ ವಿಡಿಯೋ ನೋಡಿ - Dog Entered Cricket Ground