ಚೆನ್ನೈ(ತಮಿಳುನಾಡು): ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಮಹಿಳಾ ಟಿ-20 ಸರಣಿ 1-1 ಅಂತರದಿಂದ ಸಮಬಲದಲ್ಲಿ ಮುಕ್ತಾಯವಾಗಿದೆ. ಮೂರನೇ ಮತ್ತು ಅಂತಿಮ ಪಂದ್ಯವನ್ನು ಭಾರತೀಯ ವನಿತೆಯರು 10 ವಿಕೆಟ್ಗಳಿಂದ ಗೆದ್ದರು. ಹರಿಣ ಪಡೆ ಮೊದಲ ಪಂದ್ಯ ಗೆದ್ದರೆ, ಎರಡನೇ ಪಂದ್ಯ ಮಳೆಯಿಂದ ರದ್ದಾಗಿತ್ತು.
ಇಲ್ಲಿನ ಎಂ.ಎ.ಚಿದಂಬರಂ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಪೂಜಾ ವಸ್ತ್ರಾಕರ್ ಮತ್ತು ರಾಧಾ ಯಾದವ್ ಬೌಲಿಂಗ್ ದಾಳಿಗೆ ನಲುಗಿತು. ಹೀಗಾಗಿ, 17.1 ಓವರ್ಗಳಲ್ಲಿ ಕೇವಲ 84 ರನ್‌ಗಳಿಗೆ ಸರ್ವಪತನ ಕಂಡಿತು. ಈ ಅಲ್ಪ ಗುರಿಯನ್ನು ಭಾರತೀಯ ಆಟಗಾರ್ತಿಯರು ವಿಕೆಟ್ ನಷ್ಟವಿಲ್ಲದೇ ತಲುಪಿದರು.
Series Levelled ✅#TeamIndia and @ProteasWomenCSA share the honours in the T20I series. 🤝 🏆#INDvSA | @IDFCFIRSTBank pic.twitter.com/RS3yCOjH2Q
— BCCI Women (@BCCIWomen) July 9, 2024
ವಿಜೃಂಭಿಸಿದ ಪೂಜಾ-ರಾಧಾ: ಭಾರತದ ಪರ ವೇಗಿ ಪೂಜಾ ವಸ್ತ್ರಾಕರ್ ಹಾಗು ಎಡಗೈ ಸ್ಪಿನ್ನರ್ ರಾಧಾ ಯಾದವ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದರು. ಹೀಗಾಗಿ ಎದುರಾಳಿ ತಂಡದ ಮೂವರು ಬ್ಯಾಟರ್ಗಳು ಮಾತ್ರವೇ ಒಂದಂಕಿ ರನ್ ಬಾರಿಸಲು ಶಕ್ತರಾದರು. ಆರಂಭಿಕ ಜೋಡಿ ಲಾರಾ ವೊಲ್ವಾರ್ಡ್ಟ್ ಮತ್ತು ತಜ್ಮಿನ್ ಬ್ರಿಟ್ಸ್ ಅವರನ್ನು 19 ರನ್‌ಗಳಿಗೆ ಶ್ರೇಯಾಂಕಾ ಪಾಟೀಲ್ ಬೇರ್ಪಡಿಸಿದರು. 9 ರನ್ ಗಳಿಸಿದ್ದ ನಾಯಕಿ ವೊಲ್ವಾರ್ಡ್ಟ್ ಅವರಿಗೆ ಶ್ರೇಯಾಂಕಾ ಪೆವಿಲಿಯನ್ ದಾರಿ ತೋರಿಸಿದರು. ಈ ಮೂಲಕ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು.
ನಂತರ ಬಂದ ಮರಿಜಾನ್ನೆ ಕಾಪ್ (10 ರನ್) ವಿಕೆಟ್ ಅನ್ನು ಪೂಜಾ ವಸ್ತ್ರಾಕರ್ ಉರುಳಿಸಿ ಆಫ್ರಿಕಾ ತಂಡಕ್ಕೆ ಆಘಾತ ನೀಡಿದರು. ಈ ಮೂಲಕ ಟಿ-20 ಕ್ರಿಕೆಟ್ನಲ್ಲಿ ವಸ್ತ್ರಾಕರ್ ತಮ್ಮ 50ನೇ ವಿಕೆಟ್ ಸಾಧನೆ ಮಾಡಿದರು. ಇದರ ಬೆನ್ನಲ್ಲೇ ತಜ್ಮಿನ್ ಬ್ರಿಟ್ಸ್ (20) ಅವರನ್ನು ದೀಪ್ತಿ ಶರ್ಮಾ ಔಟ್ ಮಾಡಿದರು. ಇದರಿಂದಾಗಿ ತಂಡದ 50 ಮೊತ್ತ ರನ್ ಆಗುವಷ್ಟರಲ್ಲೇ ಹರಿಣಗಳು 3 ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡರು.
ಇದರ ನಡುವೆ 17 ರನ್ ಗಳಿಸಿ ಆಡುತ್ತಿದ್ದ ಅನ್ನೆಕೆ ಬಾಷ್ ಅವರನ್ನೂ ವಸ್ತ್ರಾಕರ್ ಔಟ್ ಮಾಡಿದರು. ಈ ಬಳಿಕ ಯಾವ ಆಟಗಾರ್ತಿಯರ ಬ್ಯಾಟ್‌ನಿಂದಲೂ ನಿರೀಕ್ಷಿತ ರನ್ ಹರಿದು ಬರಲಿಲ್ಲ. ಕ್ಲೋಯ್ ಟ್ರಯಾನ್ (9) ವಿಕೆಟ್ ಅನ್ನು ಅರುಂಧತಿ ರೆಡ್ಡಿ ಕಬಳಿಸಿದರೆ, ನಂತರದಲ್ಲಿ ಐದು ವಿಕೆಟ್ಗಳ ಪೈಕಿ ಪೂಜಾ ವಸ್ತ್ರಾಕರ್ 2 ಹಾಗೂ ರಾಧಾ 3 ವಿಕೆಟ್ ಪಡೆದರು. ಇದರೊಂದಿಗೆ ಪೂಜಾ ವಸ್ತ್ರಾಕರ್ ಕೇವಲ 13 ರನ್ ನೀಡಿ 4 ಹಾಗೂ ರಾಧಾ 6 ರನ್ಗೆ 3 ವಿಕೆಟ್ ಕಿತ್ತು ಮಿಂಚಿದರು.
Team selfie with a twist 💙 💚@ProteasWomenCSA join #TeamIndia for a selfie as @JemiRodrigues leads the way 😉 🤳 #TeamIndia | #INDvSA | @IDFCFIRSTBank pic.twitter.com/LEM7rlGl9K
— BCCI Women (@BCCIWomen) July 9, 2024
ಮಂಧಾನ ಅರ್ಧಶತಕ: ಹರಿಣಗಳು ನೀಡಿದ್ದ 84 ರನ್ಗಳ ಗುರಿ ಬೆನ್ನಟ್ಟಿದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ನಿರಾಯಾಸವಾಗಿ ತಂಡಕ್ಕೆ ಗೆಲುವು ತಂದುಕೊಟ್ಟರು. ದೊಡ್ಡ ಹೊಡೆತಗಳ ಮೂಲಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಮಂಧಾನ 54 ರನ್ ಕಲೆ ಹಾಕಿದರು. ಮತ್ತೊಂದೆಡೆ, ಶಫಾಲಿ 27 ರನ್ ಗಳಿಸಿ ಅಜೇಯರಾಗುಳಿದರು.
40 ಎಸೆತಗಳನ್ನು ಎದುರಿಸಿದ ಮಂಧಾನ ಇನ್ನಿಂಗ್ಸ್ 8 ಬೌಂಡರಿ ಹಾಗೂ 2 ಸಿಕ್ಸರ್ಗಳನ್ನು ಒಳಗೊಂಡಿತ್ತು. ಹರಿಣಗಳು ಆರು ಬೌಲರ್ಗಳನ್ನು ಇಳಿಸಿದರೂ ವಿಕೆಟ್ ಕಬಳಿಸುವಲ್ಲಿ ವಿಫಲರಾದರು. ಅಂತಿಮವಾಗಿ, ಟೀಂ ಇಂಡಿಯಾ 10.5 ಓವರ್‌ಗಳಲ್ಲೇ ವಿಜಯದ ನಗೆ ಬೀರಿತು.