ಪ್ಯಾರಿಸ್ (ಫ್ರಾನ್ಸ್): ಭಾರತದ ಸ್ಟಾರ್ ಷಟ್ಲರ್ ಪಿ.ವಿ.ಸಿಂಧು ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನ ಅಂತ್ಯಗೊಂಡಿದೆ. ಹ್ಯಾಟ್ರಿಕ್ ಪದಕದ ಭರವಸೆ ಮೂಡಿಸಿದ್ದ ಸಿಂಧು ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ 9ನೇ ಶ್ರೇಯಾಂಕಿತೆ, ಚೀನಾದ ಆಟಗಾರ್ತಿ ಹೀ ಬಿಂಗ್‌ಜಿಯಾವೊ ವಿರುದ್ಧ ನೇರ ಸೆಟ್ಗಳಿಂದ ಸೋಲು ಕಂಡು ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ.
ಹೈದರಾಬಾದ್‌ನ 29 ವರ್ಷದ ಸಿಂಧು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಒಲಿಂಪಿಕ್ಸ್‌ನಲ್ಲಿ ಸತತ ಮೂರನೇ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ, ಗುರುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ಮೂರನೇ ಪದಕ ಗೆಲ್ಲುವ ನಿರೀಕ್ಷೆ ಹುಸಿಯಾಗಿದೆ.
16ನೇ ಸುತ್ತಿನ 56 ನಿಮಿಷಗಳ ಹಣಾಹಣಿಯಲ್ಲಿ ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ 19-21, 14-21 ಅಂತರದಲ್ಲಿ ಸಿಂಧು ಪರಾಭವಗೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚೀನಾದ ಇದೇ ಷಟ್ಲರ್ ಬಿಂಗ್‌ಜಿಯಾವೊ ವಿರುದ್ಧ ಗೆದ್ದು ಕಂಚಿನ ಪದಕಕ್ಕೆ ಸಿಂಧು ಮುತ್ತಿಕ್ಕಿದ್ದರು. ಬಳಿಕ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಬಿಂಗ್‌ಜಿಯಾವೊ ಸಿಂಧು ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದರು. ಈಗ ಒಲಿಂಪಿಕ್ಸ್‌ನಲ್ಲಿ ಸಿಂಧು ವಿರುದ್ಧ ಮತ್ತೆ ಚೀನಾದ ಷಟ್ಲರ್ ಸೇಡು ತೀರಿಸಿಕೊಂಡಿದ್ದಾರೆ.
ಮೊದಲ ಗೇಮ್‌ನಲ್ಲಿ 8-11ರಿಂದ ಹಿನ್ನಡೆಯಲ್ಲಿದ್ದ ಸಿಂಧು ನಂತರ ಪುಟಿದೆದ್ದು, 19ಕ್ಕೆ ಪಾಯಿಂಟ್ ಹೆಚ್ಚಿಸಿಕೊಂಡು ತಮ್ಮ ಪರಾಕ್ರಮ ತೋರಿದರು. ಆದರೆ, ಚೀನಾದ ಆಟಗಾರ್ತಿ ಸತತ ಎರಡು ಪಾಯಿಂಟ್‌ಗಳನ್ನು ಗಳಿಸಿ 21-19ರಿಂದ ಗೇಮ್‌ನ್ನು ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಬಿಂಗ್ ಜಿಯಾವೊ ಆರು ಪಾಯಿಂಟ್‌ಗಳ ಮುನ್ನಡೆ ಪಡೆದಿದ್ದರು. ಬಳಿಕ ಕಂಬ್ಯಾಕ್ ಮಾಡಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ 0-2 ನೇರ ಗೇಮ್ಗಳಲ್ಲಿ ಪಂದ್ಯವನ್ನು ಸೋತು ಹೊರಬಿದ್ದರು.
ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಏಕೈಕ ಆಟಗಾರ್ತಿ ಸಿಂಧು ಆಗಿದ್ದರು. ಈಗ ಕ್ರೀಡಾಕೂಟದಿಂದ ಹೊರಬೀಳುವ ಮೂಲಕ ಹೆಚ್.ಎಸ್.ಪ್ರಣಯ್ ಮತ್ತು ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ ಅವರನ್ನು ಸೇರಿಕೊಂಡರು. ಈಗ ಲಕ್ಷ್ಯ ಸೇನ್ ಮಾತ್ರ ಪುರುಷರ ಸಿಂಗಲ್ಸ್‌ನಲ್ಲಿ ಕಣದಲ್ಲಿ ಉಳಿದಿರುವ ಏಕೈಕ ಭಾರತೀಯರಾಗಿದ್ದಾರೆ. ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಚೀನಾದ 12ನೇ ಶ್ರೇಯಾಂಕದ ಚೌ ಟಿಯೆನ್ ಚೆನ್ ಅವರನ್ನು ಲಕ್ಷ್ಯ ಸೇನ್ ಎದುರಿಸಲಿದ್ದಾರೆ.
ಇದನ್ನೂ ಓದಿ: ಒಲಿಂಪಿಕ್ಸ್ ಬ್ಯಾಡ್ಮಿಂಟನ್: ಸಾತ್ವಿಕ್-ಚಿರಾಗ್ ಪದಕ ಕನಸು ಭಗ್ನ