ಪ್ಯಾರಿಸ್ (ಫ್ರಾನ್ಸ್): ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಸ್ಪ್ಯಾನಿಷ್ ಟೆನ್ನಿಸ್ ತಾರೆಗಳಾದ ಕಾರ್ಲೋಸ್ ಅಲ್ಕರಾಝ್ ಮತ್ತು ರಾಫೆಲ್ ನಡಾಲ್ ಜೋಡಿ ಮುಗ್ಗರಿಸಿದೆ. ಅಮೆರಿಕದ ಆಸ್ಟಿನ್ ಕ್ರಾಜಿಸೆಕ್ ಮತ್ತು ರಾಜೀವ್ ರಾಮ್ ಅವರೊಂದಿಗಿನ ಕ್ವಾರ್ಟರ್ ಫೈನಲ್ನಲ್ಲೇ ಸ್ಪ್ಯಾನಿಷ್ ತಾರಾ ಪಟುಗಳು ಸೋಲನುಭವಿಸುವ ಮೂಲಕ ಚಿನ್ನದ ಭರವಸೆಯನ್ನು ಹುಸಿಗೊಳಿಸಿದರು.
ಈ ಬಾರಿಯ ಒಲಿಂಪಿಕ್ಸ್ನಲ್ಲಿ ಟೆನ್ನಿಸ್ ಅಂಗಳದ ದಿಗ್ಗಜ ರಾಫೆಲ್ ನಡಾಲ್ ಯುವ ಸೆನ್ಸೇಷನ್ ಕಾರ್ಲೋಸ್ ಅಲ್ಕರಾಝ್ ಜೊತೆ ಡಬಲ್ಸ್ನಲ್ಲಿ ಕಣಕ್ಕಿಳಿದದ್ದು. ಹಾಗಾಗಿ ಡಬಲ್ಸ್ನಲ್ಲಿ ಪದಕ ನಿರೀಕ್ಷಿಸಲಾಗಿತ್ತು. ಆದರೆ, ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕಾದ ಆಸ್ಟಿನ್ ಮತ್ತು ರಾಜೀವ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಲ್ಕರಾಝ್-ನಡಾಲ್ ಜೋಡಿಯನ್ನು ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರದಬ್ಬುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ವಾರ್ಟರ್-ಫೈನಲ್‌ನಲ್ಲಿ, ರಾಫೆಲ್ ನಡಾಲ್ ಹಾಗೂ ಕಾರ್ಲೋಸ್ ಅಲ್ಕರಾಝ್ ಅವರನ್ನು 6-2, 6-4 ನೇರ ಸೆಟ್‌ಗಳಿಂದ ಸೋಲಿಸಿದ ಆಸ್ಟಿನ್ ಕ್ರಾಜಿಸೆಕ್ ಮತ್ತು ರಾಜೀವ್ ರಾಮ್ ಅಮೆರಿಕದ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ಹಂತಕ್ಕೇರಿತು. ಆರಂಭದಲ್ಲಾದ ಕೆಲವು ತಪ್ಪುಗಳನ್ನು ನಡಾಲ್- ಅಲ್ಕರಾಝ್ ಜೋಡಿ ಸರಿಪಡಿಸುವ ಪ್ರಯತ್ನ ಮಾಡಿದರಾದರೂ ಕೈಗೂಡಲಿಲ್ಲ. ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಮುಂದೆ ಸ್ಪ್ಯಾನಿಷ್ ತಾರೆಗಳ ಮೇಲೆ ಪ್ರಾಬಲ್ಯ ಸಾಧಿಸುವ ಮೂಲಕ ಅಮೆರಿಕದ ರಾಜೀವ್ ರಾಮ್ ಮತ್ತು ಆಸ್ಟಿನ್ ಕ್ರಾಜಿಸೆಕ್ ಜೋಡಿ ಮೊದಲ ಸೆಟ್ನಿಂದಲೂ ಪರಾಕ್ರಮ ಮೆರೆಯುತ್ತಲೇ ಬಂದಿತು.
ನಡಾಲ್- ಅಲ್ಕರಾಝ್ ಜೋಡಿ ಎಡರನೇ ಸುತ್ತಿನಲ್ಲಿ ಪುಟಿದೇಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಎರಡೂ ಜೋಡಿಗಳು ಪ್ರತಿ ಪಾಯಿಂಟ್‌ಗಾಗಿ ಕಠಿಣ ಹೋರಾಟ ನಡೆಸುವುದರೊಂದಿಗೆ ಸಮ - ಬಲ ಕಾಯ್ದುಕೊಂಡವು. ಆದರೆ, ಪಂದ್ಯದ ಉದ್ದಕ್ಕೂ ಅಮೆರಿಕ ಜೋಡಿ ತೋರಿದ ಅದ್ಭುತ ಪ್ರದರ್ಶನ ಗೆಲುವಿನ ಹಂತಕ್ಕೆ ತಂದು ನಿಲ್ಲಿಸಿತು.
"ಇದು ನನಗೆ ನಂಬಲಸಾಧ್ಯವಾದ ಅನುಭವ. ನಾನು ಎಂದಿಗೂ ಮರೆಯಲಾಗದ ಸಂಗತಿಯೂ ಹೌದು. ರಾಫಾ ಅವರೊಂದಿಗೆ ಮೈದಾನಲ್ಲಿ ಕಾಣಿಸಿಕೊಂಡ ಕ್ಷಣ ನನಗೆ ಅದ್ಭುತ ಕೊಡುಗೆ ನೀಡಿದೆ. ಬಹಳ ನಾನು ಆನಂದಿಸಿದೆ. ಈ ಕ್ಷಣ ನಮ್ಮನ್ನು ನಿರಾಸೆಗೊಳಿಸಿರಬಹುದು. ಆದರೆ, ನಮ್ಮ ಪಯಣ ಮುಂದುವರೆಯಲಿದೆ" ಎಂದು ಕಾರ್ಲೋಸ್ ಅಲ್ಕರಾಝ್ ಪಂದ್ಯದ ಬಳಿಕ ತಮ್ಮ ಅನುಭವ ಹಂಚಿಕೊಂಡರು.
ಕಾರ್ಲೋಸ್ ಅಲ್ಕರಾಝ್ ಪುರುಷರ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದು, ಇಂದು (ಆಗಸ್ಟ್ 1 ರಂದು) ನಡೆಯಲಿರುವ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಟಾಮಿ ಪೌಲ್ ಅವರನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ: ಒಂದೇ ಒಲಿಂಪಿಕ್ನಲ್ಲಿ ಎರಡು ಪದಕ ಪಡೆದ ಏಕೈಕ ಕ್ರೀಡಾಪಟು; ಶೂಟಿಂಗ್ನಲ್ಲಿ ಇತಿಹಾಸ ಬರೆದ ಮನು ಭಾಕರ್ - Paris Olympics 2024