ನವದೆಹಲಿ: ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ ತಮ್ಮ ಚೊಚ್ಚಲ ಒಲಿಂಪಿಕ್ಸ್ ಅನ್ನು ಗೆಲುವಿನೊಂದಿಗೆ ಆರಂಭಿಸಿದ್ದಾರೆ. ನಾರ್ತ್ ಪ್ಯಾರಿಸ್ ಅರೆನಾದಲ್ಲಿ ಶನಿವಾರ ರಾತ್ರಿ ನಡೆದ ಮಹಿಳೆಯರ ಬಾಕ್ಸಿಂಗ್ 54 ಕೆ.ಜಿ ಈವೆಂಟ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ವಿಯೆಟ್ನಾಂನ ವೋ ಥಿ ಕಿಮ್ ಅನ್ಹ್ ಅವರನ್ನು ಪ್ರೀತಿ 5-0 ಅಂತರದಿಂದ ಸೋಲಿಸಿದರು.
ಹರಿಯಾಣದ ಅಥ್ಲೀಟ್ ಪ್ರೀತಿ ಪವಾರ್, ಆರಂಭಿಕ ಸುತ್ತಿನಲ್ಲಿ ಎದುರಾಳಿ ವಿರುದ್ಧ ಪ್ರಭಾವ ಬೀರಲು ಸಾಧ್ಯವಾಗದೇ ಹಿನ್ನಡೆ ಅನುಭವಿಸಿದ್ದರು. ಮೊದಲ ಸುತ್ತಿನ ಆರು ರೌಂಡ್ಸ್ ವಿಯೆಟ್ನಾಂ ಪರವಾಗಿದ್ದವು. ಆದಾಗ್ಯೂ, ಮೊದಲ ಸುತ್ತಿನ ಕೊನೆಯ ನಿಮಿಷಗಳಲ್ಲಿ ಪುಟಿದೆದ್ದ ಭಾರತದ ಬಾಕ್ಸರ್ ಆಕ್ರಮಣಕಾರಿ ತಂತ್ರಗಳ ಮೂಲಕ ಎದುರಾಳಿಗೆ ಬಲವಾದ ಪಂಚ್ಗಳನ್ನು ಮಾಡಿ ಪಂದ್ಯದ ಫಲಿತಾಂಶವನ್ನೇ ತನ್ನೆಡೆ ತಿರುಗಿಸಿ ಭರ್ಜರಿಯಾಗಿ ಗೆದ್ದರು.
ಈ ಗೆಲುವಿನೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಪ್ರೀತಿ 16ನೇ ಸುತ್ತು ತಲುಪಿದ್ದಾರೆ. ಈ ಘಟ್ಟದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ನ ಎರಡನೇ ಶ್ರೇಯಾಂಕದ ಕೊಲಂಬಿಯಾದ ಯೆನಿ ಅರಿಯಾಸ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ್ದೇ ಆದಲ್ಲಿ ಒಲಿಂಪಿಕ್ಸ್ ಪದಕ ಹಾದಿ ಮತ್ತಷ್ಟು ಸುಲಭವಾಗಲಿದೆ. ಪ್ರೀತಿ ಅವರ ಮುಂದಿನ ಪಂದ್ಯ ಮಂಗಳವಾರ ನಡೆಯಲಿದೆ.
20 ವರ್ಷದ ಬಾಕ್ಸರ್ ಪ್ರೀತಿ, ಕಳೆದ ವರ್ಷ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದರು. ಈ ಬಾರಿಯ ಒಲಿಂಪಿಕ್ಸ್ನಲ್ಲಿ ಒಟ್ಟು ಆರು ಭಾರತೀಯ ಬಾಕ್ಸರ್‌ಗಳು ಸ್ಪರ್ಧಿಸುತ್ತಿದ್ದಾರೆ. ಭಾನುವಾರ ಜರ್ಮನಿಯ ಮ್ಯಾಕ್ಸಿ ಕ್ಲೋಟ್ಜರ್ ವಿರುದ್ಧ 32ರ ಸುತ್ತಿನ ಪಂದ್ಯದಲ್ಲಿ ನಿಖತ್ ಜರೀನ್ ತನ್ನ ಅಭಿಯಾನ ಪುನರಾರಂಭಿಸಲಿದ್ದಾರೆ.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್: ಆರಂಭಿಕ ಪಂದ್ಯ ಸೋತ ಅಶ್ವಿನಿ ಪೊನ್ನಪ್ಪ-ತನಿಶಾ ಜೋಡಿ - Paris Olympics Badminton