ಇಸ್ಲಾಮಾಬಾದ್ (ಪಾಕಿಸ್ತಾನ): ನೆರೆಯ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಬೆಳಕಿಗೆ ಬಂದಿದೆ. ಹೌದು, ಚೀನಾದಲ್ಲಿ ನಡೆದ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಂಚಿನ ಪದಕ ಗೆದ್ದಿರುವ ಪಾಕಿಸ್ತಾನ ಹಾಕಿ ತಂಡದ ಆಟಗಾರರು ಸದ್ಯದ ಪರಿಸ್ಥಿತಿ ಬಗ್ಗೆ ಬಾಯ್ಬಿಚ್ಚಿದ್ದಾರೆ. ಪಾಕಿಸ್ತಾನ ಹಾಕಿ ತಂಡದ ಪ್ರತಿಯೊಬ್ಬ ಆಟಗಾರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ಜೀವನ ನಿರ್ವಹಣೆಗೂ ಸಾಕಷ್ಟು ತೊಂದರೆ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.
ಪಾಕ್ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಮೊದಲು ಪಾಕಿಸ್ತಾನಿ ಹಾಕಿ ತಂಡಕ್ಕೆ, ಶಿಬಿರದ ಸಮಯದಲ್ಲಿ 25 ದಿನಗಳ ಕಾಲ ನೀಡಬೇಕಾದ ದೈನಂದಿನ ಭತ್ಯೆ ಕೂಡ ನೀಡಲಾಗಿಲ್ಲ. ಹಾಗಾಗಿ ಪಂದ್ಯಾವಳಿಗಾಗಿ ಚೀನಾಕ್ಕೆ ತೆರಳುವಾಗ ಹಣದ ಕೊರತೆ ಉಂಟಾಗಿತ್ತು ಎಂದು ತಿಳಿಸಿದ್ದಾರೆ. ಪಾಕಿಸ್ತಾನಿ ಆಟಗಾರರಿಗೆ ದೇಶೀಯ ದೈನಂದಿನ ಭತ್ಯೆ 3,000 ಪಾಕಿಸ್ತಾನಿ ರೂಪಾಯಿಗಳನ್ನು ನೀಡಲಾಗುತ್ತದೆ, ಆದರೆ, ಅಂತಾರಾಷ್ಟ್ರೀಯ ದೈನಂದಿನ ಭತ್ಯೆ 35,000 ರೂಪಾಯಿಯನ್ನು ನೀಡಲಾಗುತ್ತಿಲ್ಲ ಎಂದಿರುವ ಆಟಗಾರರು ಪಾಕಿಸ್ತಾನ ಹಾಕಿ ಫೆಡರೇಶನ್ಗೆ ದೈನಂದಿನ ಭತ್ಯೆ ಕೊಡುವಂತೆ ಕೋರಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಜೀವನ ನಡೆಸುವುದೇ ಕಷ್ಟವಾಗುತ್ತಿದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ದಿನಭತ್ಯೆ ನೀಡದಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ ಎಂದು ಆಟಗಾರರೊಬ್ಬರು ಮಾಧ್ಯಮಮುಂದೆ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ದಿನಭತ್ಯೆ ನಮ್ಮ ಹಕ್ಕಾಗಿದ್ದು ನಮಗೆ ನೀಡಬೇಕು ಎಂದು ಸರಕಾರಕ್ಕೆ ಆಗ್ರಹಿಸುತ್ತಿದ್ದಾರೆ.
100 ಡಾಲರ್ ಬಹುಮಾನ: ಚೀನಾದಲ್ಲಿ ಏಷ್ಯನ್ ಹಾಕಿ ಚಾಂಪಿಯನ್ಸ್ನಲ್ಲಿ ಭಾಗಿಯಾಗಿ ಕಂಚು ಗೆದ್ದಿರುವ ಪಾಕ್ ಆಟಗಾರರಿಗೆ ಕೇವಲ 100 ಡಾಲರ್ ಮಾತ್ರ ನೀಡಲಾಗಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 8,300 ರೂಪಾಯಿ ಆಗಿದೆ. ಈ ಬಹುಮಾನ ಘೋಷಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನವನ್ನು ಭಾರೀ ಟ್ರೋಲ್ ಮಾಡಲಾಗಿತ್ತು. ಕಾರಣ ಹಾಕಿ ಚಾಂಪಿಯನ್ಸ್ ಪಂದ್ಯಕ್ಕಾಗಿ ಚೀನಾಗೆ ತೆರಳಲು ಪಾಕ್ ಆಟಗಾರರ ಬಳಿ ಹಣ ವಿರಲಿಲ್ಲ. ಇದಕ್ಕಾಗಿ ಅವರು ಸಾಲ ಮಾಡಿ ವಿಮಾನ ಟಿಕೆಟ್ ಖರೀದಿ ಮಾಡಿ ಪ್ರಯಾಣಿಸಿದ್ದರು. ಪಾಕ್ನಿಂದ ಚೀನಾಗೆ ತಲುಪಲು ಸಾಮಾನ್ಯ ವಿಮಾನ ಟಿಕೆಟ್ ದರ 35 ಸಾವಿರ ರೂ ವರೆಗೂ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕ್ ಆಟಗಾರರಿಗೆ ಕನಿಷ್ಠ ವಿಮಾನ ಟಿಕೆಟ್ ದರವನ್ನು ಕೊಟ್ಟಿಲ್ಲ ಎಂದು ಕಿಡಿ ಕಾರುತ್ತಿದ್ದಾರೆ.
ಇದನ್ನೂ ಓದಿ: ಅಬ್ಬಾ! F1 ರೇಸ್ನಲ್ಲಿ ಬಳಸುವ ಸ್ಪೋರ್ಟ್ಸ್ ಕಾರಿನ ಬೆಲೆ ಎಷ್ಟು ಗೊತ್ತಾ: ನೀವು ಊಹಿಸಲು ಅಸಾಧ್ಯ! - F1 race car price