ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೊದಲ ಕ್ವಾಲಿಫೈಯರ್ ಆತಿಥ್ಯ ವಹಿಸಲಿರುವ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರೀ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸೋಮವಾರ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ನಾಲ್ವರು ಶಂಕಿತ ಐಎಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಭಯೋತ್ಪಾದಕರ ಬಂಧನದ ಬಳಿಕ ಈ ಭಾರೀ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಇಂದಿನ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ಈ ಹೈವೋಲ್ಟೇಜ್ ಪಂದ್ಯವನ್ನು ನೇರವಾಗಿ ವೀಕ್ಷಣೆ ಮಾಡಲೆಂದೇ ಸಾವಿರಾರು ಅಭಿಮಾನಿಗಳು ಜಮಾಯಿಸುವ ನಿರೀಕ್ಷೆಯಿದೆ. ಸುರಕ್ಷತಾ ದೃಷ್ಟಿಯಿಂದ ಅಹಮದಾಬಾದ್ ಪೊಲೀಸರು ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ. ಇತ್ತೀಚಿಗೆ ನಡೆದ ಸಮಾಜಘಾತುಕ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚು ಕಟ್ಟೆಚ್ಚರ ವಹಿಸಿದ್ದಾರೆ. ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಪ್ರತಿಯೊಬ್ಬರ ಮೇಲೂ ಕಣ್ಣಿಡಲಾಗುವುದು. ಹೆಚ್ಚಿನ ಭದ್ರತೆ ಅವಶ್ಯಕತೆ ಇರುವುದರಿಂದ ಐದು ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಮತ್ತು 10 ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಸೇರಿದಂತೆ ಒಟ್ಟು 3,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಚ್ಚುವರಿಯಾಗಿ, 800ಕ್ಕೂ ಅಧಿಕ ಖಾಸಗಿ ಭದ್ರತಾ ಸಿಬ್ಬಂದಿ ಕ್ರೀಡಾಂಗಣದ ಆವರಣದಲ್ಲಿ ಇರಲಿದ್ದಾರೆ. ಪಂದ್ಯದ ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ತಡೆಗಟ್ಟಲು ಪೊಲೀಸ್ ಬೆಂಗಾವಲು ಪಡೆಯನ್ನು ಕ್ರೀಡಾಂಗಣದಲ್ಲಿ ಇರಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಹೈ ಅಲರ್ಟ್: ಶಂಕಿತ ಐಎಸ್ ಭಯೋತ್ಪಾದಕರ ಬಂಧನ ಹಿನ್ನೆಲೆ ಅಹಮದಾಬಾದ್‌ನಲ್ಲಿ ಹೈ ಅಲರ್ಟ್‌ನಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಧಿತ ಶಂಕಿತರು ಶ್ರೀಲಂಕಾದಿಂದ ಚೆನ್ನೈಗೆ ಮತ್ತು ನಂತರ ಅಹಮದಾಬಾದ್‌ಗೆ ಪ್ರಯಾಣಿಸಿರುವುದು ಪತ್ತೆಯಾಗಿದೆ. ಅಹಮದಾಬಾದ್ ವಿಮಾನ ನಿಲ್ದಾಣದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಶಂಕಿತರು ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೇಗೆ ತಲುಪಿದರು? ಇವರ ಉದ್ದೇಶ ಏನಿತ್ತು? ಎಂಬುದು ಸೇರಿದಂತೆ ಎಲ್ಲದರ ಕುರಿತು ಯುದ್ಧೋಪಾದಿಯಲ್ಲಿ ತೀವ್ರ ತನಿಖೆ ನಡೆಸಲಾಗುತ್ತಿದೆ. ಗುಜರಾತ್ ಎಟಿಎಸ್ ಉಗ್ರರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದೆ. ಸದ್ಯ ಈ ನಾಲ್ವರು ಶಂಕಿತ ಭಯೋತ್ಪಾದಕರನ್ನು ಸೆರೆ ಹಿಡಿಯುವ ಮೂಲಕ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಆಗಬೇಕಿದ್ದ ಅನಾಹುತವನ್ನು ವಿಫಲಗೊಳಿಸಿದೆ. ಬಂಧಿತ ಭಯೋತ್ಪಾದಕರು ಶ್ರೀಲಂಕಾ ಪ್ರಜೆಗಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಅವರನ್ನು 14 ದಿನಗಳ ಕಾಲ ರಿಮಾಂಡ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.