ಗುಲ್ಮಾರ್ಗ್ (ಜಮ್ಮು ಮತ್ತು ಕಾಶ್ಮೀರ): ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನ ನಾಲ್ಕನೇ ಆವೃತ್ತಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಭಾರತೀಯ ಸೇನೆ ಸರ್ವ ವಿಭಾಗಗಳಲ್ಲೂ ಒಟ್ಟಾರೆ ವಿಜೇತ ತಂಡವಾಗಿ ಹೊರಹೊಮ್ಮಿದೆ. ಸ್ಪರ್ಧೆ ಉದ್ದಕ್ಕೂ ಭಾರತೀಯ ಸೇನೆ 10 ಚಿನ್ನ, ಐದು ಬೆಳ್ಳಿ ಮತ್ತು ಆರು ಕಂಚಿನ ಪದಕಗಳು ಸೇರಿದಂತೆ ಒಟ್ಟು 21 ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
ಒಂಬತ್ತು ಚಿನ್ನ ಮತ್ತು ಎರಡು ಬೆಳ್ಳಿಯೊಂದಿಗೆ 11 ಪದಕಗಳನ್ನು ಗೆದ್ದಿರುವ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 22 ಪದಕಗಳನ್ನು ಗೆದ್ದಿರುವ ಮಹಾರಾಷ್ಟ್ರದ ಮೂರನೇ ಸ್ಥಾನಿಯಾಗಿ ಹೊರ ಹೊಮ್ಮಿತು. ಮಹಾರಾಷ್ಟ್ರ ತಂಡವು ಏಳು ಚಿನ್ನ, ಎಂಟು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಪಡೆದುಕೊಂಡಿದೆ.
ಆತಿಥೇಯ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಕ್ರಮವಾಗಿ 15 ಮತ್ತು 11 ಪದಕಗಳೊಂದಿಗೆ ಕ್ರಮವಾಗಿ ಆರು ಮತ್ತು ಒಂಬತ್ತನೇ ಸ್ಥಾನಗಳನ್ನು ಪಡೆದುಕೊಂಡಿವೆ. ಲಡಾಖ್ ಎರಡು ಚಿನ್ನ, ಆರು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಗೆದ್ದರೆ, ಜಮ್ಮು ಕಾಶ್ಮೀರ ಒಂದು ಚಿನ್ನ, ಆರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ತನ್ನ ಕೊರಳಿಗೆ ಹಾಕಿಸಿಕೊಂಡಿದೆ.
2020 ರಲ್ಲಿ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಪ್ರಾರಂಭಿಸಲಾಗಿತ್ತು. ಕೇಂದದ ಕ್ರೀಡಾ ಸಚಿವಾಲಯದ ಬೆಂಬಲದೊಂದಿಗೆ ಜೆ-ಕೆ ಸ್ಪೋರ್ಟ್ಸ್ ಕೌನ್ಸಿಲ್ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಂಟರ್ ಗೇಮ್ಸ್ ಅಸೋಸಿಯೇಷನ್ ಈ ಕ್ರೀಡಾಕೂಟ ಆಯೋಜಿಸುತ್ತಾ ಬಂದಿದೆ. ಬಹು - ಕ್ರೀಡಾಕೂಟದ ಮೊದಲ ಭಾಗವು ಫೆಬ್ರವರಿ 2 ರಿಂದ 6 ರವರೆಗೆ ಲಡಾಖ್‌ನ ಲೇಹ್‌ನಲ್ಲಿ ನಡೆದಿತ್ತು. ಈ ಸ್ಪರ್ಧೆಯಲ್ಲಿ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಎರಡು ಸಾರ್ವಜನಿಕ ಸಂಸ್ಥೆಗಳು ಸೇರಿ ಒಟ್ಟು 344 ಕ್ರೀಡಾಪಟುಗಳು ಐಸ್ ಹಾಕಿ ಮತ್ತು ಸ್ಪೀಡ್ ಸ್ಕೇಟಿಂಗ್ ವಿಭಾಗದಲ್ಲಿ ಭಾಗವಹಿಸಿದ್ದರು. ಉಳಿದ ಕ್ರೀಡೆಗಳಾದ -ಸ್ಕೀ ಪರ್ವತಾರೋಹಣ, ಆಲ್ಪೈನ್ ಸ್ಕೀಯಿಂಗ್, ಸ್ನೋಬೋರ್ಡಿಂಗ್, ನಾರ್ಡಿಕ್ ಸ್ಕೀಯಿಂಗ್ ಮತ್ತು ಗಾಂಡೋಲಾ - ಗುಲ್ಮಾರ್ಗ್‌ನಲ್ಲಿ ಆಡಲಾಯಿತು. ಇಲ್ಲಿ 361 ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
ಮೊದಲ ವರ್ಷ ಮಹಾರಾಷ್ಟ್ರ ಆರು ಚಿನ್ನ ಸೇರಿದಂತೆ 20 ಪದಕಗಳೊಂದಿಗೆ ಅಗ್ರಸ್ಥಾನಿಯಾಗಿತ್ತು. ಆರು ಚಿನ್ನ ಸೇರಿದಂತೆ ಎಂಟು ಪದಕಗಳೊಂದಿಗೆ ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು. ಲಡಾಕ್ ಎರಡು ಚಿನ್ನ ಸೇರಿದಂತೆ 13 ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿತ್ತು.
ಇದನ್ನು ಓದಿ: ನಾರ್ಡಿಕ್ ಸ್ಕೀಯಿಂಗ್ನಲ್ಲಿ 3 ಚಿನ್ನದ ಪದಕ ಬಾಚಿದ ಕೊಡಗಿನ ಬೆಡಗಿ ಭವಾನಿ