ದುಬೈ: ಭಾರತದ '360 ಡಿಗ್ರಿ ಬ್ಯಾಟರ್' ಸೂರ್ಯಕುಮಾರ್ ಯಾದವ್ ವಿಶ್ವದ ನಂಬರ್ 1 ಟಿ-20 ಬ್ಯಾಟರ್ ಎಂಬ ಪಟ್ಟ ಕಳೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬುಧವಾರ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಆಟಗಾರ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ಕಳೆದ 8 ತಿಂಗಳಿನಿಂದ ಟಿ20 ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಸೂರ್ಯಕುಮಾರ್ ಯಾದವ್ರನ್ನು ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಕೆಳಗಿಳಿಸಿ ನಂಬರ್ 1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಟಿ-20 ವಿಶ್ವಕಪ್ನಲ್ಲಿ ತೋರಿದ ಉತ್ತಮ ಪ್ರದರ್ಶನ ಅವರನ್ನು ಅಗ್ರಸ್ಥಾನಕ್ಕೆ ತಂದು ಕೂರಿಸಿದೆ.
ಸೂರ್ಯಕುಮಾರ್ ಯಾದವ್ 2023ರ ಡಿಸೆಂಬರ್ನಿಂದ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಈಚೆಗೆ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಈ ಹೊಡಿಬಡಿ ಆಟಗಾರ ವಿಫಲವಾಗಿದ್ದರು. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಸೂಪರ್ 8 ಪಂದ್ಯದಲ್ಲಿ ಭಾರತದ ವಿರುದ್ಧ 76 ರನ್ ಸೇರಿ ಎರಡು ಅರ್ಧಶತಕದೊಂದಿಗೆ 255 ರನ್ ಗಳಿಸಿದ್ದಾರೆ. ಇದರಿಂದ 844 ಅಂಕಗಳೊಂದಿಗೆ 4 ಸ್ಥಾನ ಮೇಲೇರಿ ಮೊದಲ ಸ್ಥಾನ ಪಡೆದಿದ್ದಾರೆ.
Australia's belligerent southpaw ends Suryakumar Yadav's reign at the 🔝 of Men's T20I Batting Ranking 🤩https://t.co/nAJR10IVCp
— ICC (@ICC) June 26, 2024
ಅಗ್ರಸ್ಥಾನಕ್ಕೇರಲು ಇದೆ ಚಾನ್ಸ್: ಸೂರ್ಯಕುಮಾರ್ ಹೆಡ್ಗಿಂತ ಕೇವಲ 2 ಅಂಕ ಹಿಂದಿದ್ದಾರೆ. ಸದ್ಯ 842 ರೇಟಿಂಗ್ಸ್ ಹೊಂದಿರುವ ಭಾರತದ ಬ್ಯಾಟರ್ ವಿಶ್ವಕಪ್ನ ಉಳಿದ ಪಂದ್ಯಗಳಲ್ಲಿ ಸಿಡಿದರೆ ಮತ್ತೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಆಸ್ಟ್ರೇಲಿಯಾ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಬ್ಯಾಟರ್ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಫಿಲ್ ಸಾಲ್ಟ್, ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ನಂತರದ ಸ್ಥಾನದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್ 7ನೇ ಸ್ಥಾನದಲ್ಲಿದ್ದು, ಅಗ್ರ 10ರಲ್ಲಿರುವ ಇನ್ನೊಬ್ಬ ಭಾರತೀಯ ಬ್ಯಾಟರ್ ಆಗಿದ್ದಾರೆ.
ಬೂಮ್ ಬೂಮ್ ಬುಮ್ರಾ: ಬೌಲರ್ಗಳ ವಿಭಾಗದಲ್ಲಿ ಭಾರತೀಯರು ಉತ್ತಮ ಸಾಧನೆ ಮಾಡಿದ್ದಾರೆ. ಭಾರತದ ಟ್ರಂಪ್ ಕಾರ್ಡ್ ವೇಗಿ ಜಸ್ಪ್ರೀತ್ ಬುಮ್ರಾ 44 ಸ್ಥಾನಗಳ ಜಿಗಿದು 24ನೇ ಸ್ಥಾನ ಪಡೆದಿದ್ದಾರೆ. ಸ್ಪಿನ್ನರ್ ಕುಲದೀಪ್ ಯಾದವ್ 20 ಸ್ಥಾನ ಮೇಲೇರಿ 11ನೇ ಸ್ಥಾನಕ್ಕೆ ತಲುಪಿದ್ದಾರೆ. ಅಗ್ರ 10ರ ಪೈಕಿ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಎಂಟನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಆದಿಲ್ ರಶೀದ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್, ಜೋಶ್ ಹ್ಯಾಜಲ್‌ವುಡ್ ನಂತರದ ಸ್ಥಾನದಲ್ಲಿದ್ದಾರೆ.
ಹಾರ್ದಿಕ್ ಟಾಪ್ 3 ಆಲ್ರೌಂಡರ್: ಆಲ್ರೌಂಡರ್ಗಳ ಪಟ್ಟಿಯಲ್ಲಿ ಭಾರತದ ತಾರಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಲ್ಕು ಸ್ಥಾನ ಮೇಲೇರಿ 3 ಶ್ರೇಯಾಂಕ ಪಡೆದಿದ್ದಾರೆ. ಅಕ್ಷರ್ ಪಟೇಲ್ 1 ಸ್ಥಾನ ಕುಸಿದು 19ರಲ್ಲಿದ್ದಾರೆ. ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಮಾರ್ಕಸ್ ಸ್ಟೊಯಿನೀಸ್ 3 ಸ್ಥಾನ ಕುಸಿದು 4ನೇ ಕ್ರಮಾಂಕ ಪಡೆದರೆ, ಶ್ರೀಲಂಕಾದ ವನಿಂದು ಹಸರಂಗ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಅಫ್ಘಾನಿಸ್ತಾನದ ಮೊಹಮದ್ ನಬಿ ಎರಡನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ನ ಡಿಎಲ್ಎಸ್ ನಿಯಮದ ಸಹಶೋಧಕ ಫ್ರಾಂಕ್ ಡಕ್ವರ್ತ್ ನಿಧನ - Frank Duckworth