ಹೈದರಾಬಾದ್: ತವರು ನೆಲದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಭಾರತ 2 ಪಂದ್ಯಗಳಲ್ಲಿ ಸೋಲನುಭವಿಸಿದೆ. ಎರಡೂ ಪಂದ್ಯಗಳಲ್ಲಿ ರೋಹಿತ್, ಕೊಹ್ಲಿ ಸೇರಿ ಕೆಲ ಅನುಭವಿ ಬ್ಯಾಟರ್ಗಳು ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆ ಭಾರತ ಸರಣಿಯನ್ನು ಕಳೆದುಕೊಂಡಿದೆ. ತವರಿನಲ್ಲಿ 12 ವರ್ಷಗಳ ಕಾಲ ಒಂದೇ ಒಂದು ಟೆಸ್ಟ್ ಸರಣಿ ಸೋಲದ ಭಾರತಕ್ಕೆ ಇದು ದೊಡ್ಡ ಆಘಾತವಾಗಿದೆ.
ಮತ್ತೊಂದೆಡೆ ಇತ್ತೀಚೆಗಷ್ಟೇ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿರುವ ಗೌತಮ್ ಗಂಭೀರ್ ಈ ಸೋಲಿನಿಂದ ಆಘಾತಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡದ ವಿರುದ್ಧ ಗಂಭೀರ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆ ಇದುವರೆಗೂ ನೀಡಲಾಗಿದ್ದ ‘ಆಪ್ಷನಲ್ ತರಬೇತಿ’ ಆಯ್ಕೆಯನ್ನೂ ರದ್ದುಪಡಿಸಲಾಗಿದೆ ಎಂದು ವರದಿಯಾಗಿದೆ.
'ಆಪ್ಷನಲ್ ತರಬೇತಿ' ಎಂದರೇನು: ಯಾವುದೇ ಸರಣಿಗೂ ಮುನ್ನ ಅಭ್ಯಾಸದ ಭಾಗವಾಗಿ ಆಟಗಾರರಿಗೆ ಪ್ರಾಕ್ಟಿಸ್ ಸೆಷನ್ಗಳು ನಡೆಯುವುದು ಸಹಜ. ಆದರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಟಾಪ್ ಸ್ಟಾರ್‌ಗಳಿಗೆ ಇದು ಆಪ್ಷನಲ್ ಆಗಿರುತ್ತದೆ. ಏಕೆಂದರೆ ಪ್ರಾಕ್ಟಿಸ್ ಸೆಷನ್ನಲ್ಲಿ ಗಾಯಗೊಂಡರೆ ಸಮಸ್ಯೆ ಆಗುತ್ತದೆ ಎಂದು ಗಾಯಗೊಳ್ಳುವ ಸಾಧ್ಯತೆ ಇರುವ ಕಾರಣ ವಿಶ್ರಾಂತಿ ನೀಡಲಾಗುತಿತ್ತು. ಆದರೆ ಇದೀಗ ಸೋಲಿನಿಂದಾಗಿ ಇನ್ಮುಂದೆ ಪ್ರತಿಯೊಬ್ಬ ಆಟಗಾರನೂ ಪ್ರಾಕ್ಟಿಸ್ ಸೆಷನ್‌ಗೆ ಹಾಜರಾಗಬೇಕು ಎಂದು ಮ್ಯಾನೇಜ್‌ಮೆಂಟ್ ಇತ್ತೀಚೆಗೆ ಹೇಳಿಕೆ ನೀಡಿದೆ.
ಇದನ್ನೂ ಓದಿ: 'ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ಗೆ ನಿವೃತ್ತಿ ಘೋಷಿಸಲಿ': ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಆಕ್ರೋಶ
"ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ ಎರಡು ದಿನಗಳ ಪ್ರಾಕ್ಟಿಸ್ ಸೆಷನ್ ನಡೆಸಲು ಆಡಳಿತ ಮಂಡಳಿಯು ಆಶಿಸುತ್ತಿದೆ. ಈ ಸೆಷನ್ ಅಕ್ಟೋಬರ್ 30-31ರ ವರೆಗೆ ನಡೆಯಲಿದೆ. ಅಲ್ಲದೇ ಈ ಸೆಷನ್‌ಗೆ ಟೆಸ್ಟ್ ತಂಡದಲ್ಲಿರುವ ಪ್ರತಿಯೊಬ್ಬರು ಬರಲೇಬೇಕು ಎಂದು ಕೋಚ್ ಗಂಭೀರ್ ಕಟುನಿಟ್ಟಿನ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. ಇದನ್ನು ಯಾರೂ ತಪ್ಪಿಸಿಕೊಳ್ಳಬಾರದು ಹಿರಿಯ ಆಟಗಾರರೂ ಕೂಡ ಬರಲೇಬೇಕು ಎಂದು ಮ್ಯಾನೇಜ್‌ಮೆಂಟ್ ಹೇಳಿದೆ.
ಮತ್ತೊಂದೆಡೆ ಕಿವೀಸ್ ವಿರುದ್ಧದ ಮೂರನೇ ಟೆಸ್ಟ್ ನವೆಂಬರ್ 1 ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಈ ಕೊನೆಯ ಪಂದ್ಯವನ್ನು ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ಅವಕಾಶವನ್ನು ಸುಧಾರಿಸಿಕೊಳ್ಳುವ ಗುರಿಯೊಂದಿಗೆ ಭಾರತ ಇದೀಗ ಅಖಾಡಕ್ಕೆ ಇಳಿಯಲಿದೆ. ಈ ತರಬೇತಿಯು ಎಷ್ಟು ಸಹಾಯಕವಾಗಲಿದೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ರೋಹಿತ್, ಕೊಹ್ಲಿ ಟೆಸ್ಟ್ನಲ್ಲಿ ಕೊನೆಯ ಶತಕ ಸಿಡಿಸಿದ್ದು ಯಾವಾಗ ಗೊತ್ತಾ?