ಬೆಂಗಳೂರು/ಕೆನ್ಸಿಂಗ್ಟನ್: ಕೆರಿಬಿಯನ್ನರ ನಾಡಿನಲ್ಲಿ ನಡೆಯುತ್ತಿರುವ T-20 ವಿಶ್ವಕಪ್ ಅಂತಿಮ ಹಂತ ತಲುಪಿದೆ. ಇಂದು ಬ್ರಿಡ್ಜ್ ಟೌನ್‌ನ ಕೆನ್ಸಿಂಗ್ಟನ್ ಓವಲ್ ಅಂಗಳದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ - ದಕ್ಷಿಣ ಆಫ್ರಿಕಾ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ.
ಮೊದಲ ಬಾರಿ ಚುಟುಕು ವಿಶ್ವ ಸಮರದ ಫೈನಲ್‌ನಲ್ಲಿರುವ ದ.ಆಫ್ರಿಕಾ ಚೊಚ್ಚಲ ಪ್ರಶಸ್ತಿಯ ಹುಮ್ಮಸ್ಸಿನಲ್ಲಿದೆ. ಮತ್ತೊಂದೆಡೆ ಮೂರನೇ ಬಾರಿ ಫೈನಲ್ ಹಂತಕ್ಕೇರಿರುವ ಭಾರತ ದೀರ್ಘಕಾಲದ ಐಸಿಸಿ ಚಾಂಪಿಯನ್ಶಿಪ್ ಬರ ನೀಗಿಸಿಕೊಳ್ಳುವ ತವಕದಲ್ಲಿದೆ. ಆ ಮೂಲಕ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಸಾಧಿಸಿರುವ ದಾಖಲೆಯೊಂದನ್ನ ಸರಿಗಟ್ಟಲು ಭಾರತ ಸಜ್ಜಾಗಿದೆ.
2007ರಲ್ಲಿ ಆರಂಭವಾದ T-20 ವಿಶ್ವಕಪ್ ಮಾದರಿಯಲ್ಲಿ ಇಲ್ಲಿಯವರೆಗೂ 9 ಆವೃತ್ತಿಗಳು ನಡೆದಿವೆ. ಆ ಪೈಕಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಮಾತ್ರವೇ ಎರಡು ಬಾರಿ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿವೆ.
ಶ್ರೀಲಂಕಾದಲ್ಲಿ ನಡೆದಿದ್ದ 2012ರ ಹಾಗೂ ಭಾರತದಲ್ಲಿ ನಡೆದಿದ್ದ 2016ರ T-20 ವಿಶ್ವಕಪ್‌ನಲ್ಲಿ ಡರೇನ್ ಸ್ಯಾಮಿ ನೇತೃತ್ವದಲ್ಲಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ ಆದರೆ, ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ 2010ರ ಆವೃತ್ತಿಯಲ್ಲಿ ಪೌಲ್ ಕಾಲಿಂಗ್ವುಡ್ ನೇತೃತ್ವದಲ್ಲಿ ಹಾಗೂ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ 2022ರ ಆವೃತ್ತಿಯಲ್ಲಿ ಜೋಸ್ ಬಟ್ಲರ್ ನೇತೃತ್ವದಲ್ಲಿ ಇಂಗ್ಲೆಂಡ್ ತಂಡ ಗೆದ್ದು ಬೀಗಿತ್ತು.
2007ರ ಮೊದಲ ಆವೃತ್ತಿಯ ಚುಟುಕು ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅದಾದ ಬಳಿಕ 2014ರಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ, ಶ್ರೀಲಂಕಾ ವಿರುದ್ಧ 6 ವಿಕೆಟ್‌ಗಳ ಅಂತರದಲ್ಲಿ ಸೋಲನುಭವಿಸಿತ್ತು. 10 ವರ್ಷಗಳ ಬಳಿಕ ಮತ್ತೊಮ್ಮೆ T-20 ವಿಶ್ವಕಪ್ ಫೈನಲ್ ಹಂತ ತಲುಪಿರುವ ಭಾರತ ಪ್ರಶಸ್ತಿ ಗೆದ್ದು ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳ ದಾಖಲೆ ಸರಿಗಟ್ಟುವ ಹುಮ್ಮಸ್ಸಿನಲ್ಲಿದೆ.
ಭಾರತ (ಸಂಭಾವ್ಯ ತಂಡ): ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕಾ (ಸಂಭಾವ್ಯ ತಂಡ): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜೆನ್ಸನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ.
ಸ್ಥಳ: ಕೆನ್ಸಿಂಗ್ಟನ್ ಓವಲ್, ಬ್ರಿಡ್ಜ್‌ಟೌನ್
ಸಮಯ: ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ, ಡಿಸ್ನಿ ಹಾಟ್‌ಸ್ಟಾರ್
ಇದನ್ನೂ ಓದಿ: ಟಿ-20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ: ಮೀಸಲು ದಿನವೂ ಮಳೆ ಬಂದರೆ ಯಾರಾಗಲಿದ್ದಾರೆ ಚಾಂಪಿಯನ್? - weather report