Ind vs Aus 4th test: ಬಾರ್ಡರ್ ಗವಾಸ್ಕರ್ ಟ್ರೋಫಿ ಭಾಗವಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲನುಭವಿಸಿದೆ. ಈ ರೋಚಕ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಸಾಂಘಿಕ ಪ್ರದರ್ಶನ ತೋರಿದ್ದರೂ ಅಂತಿಮವಾಗಿ 184ರನ್ ಗಳಿಂದ ಸೋಲನ್ನು ಕಂಡಿದೆ. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.
ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 228/9 ಓವರ್‌ನೈಟ್ ಸ್ಕೋರ್‌ನೊಂದಿಗೆ ಐದನೇ ದಿನದಾಟವನ್ನು ಪ್ರಾರಂಭಿಸಿ 234 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ 105 ರನ್‌ಗಳ ಮುನ್ನಡೆಯೊಂದಿಗೆ ಭಾರತಕ್ಕೆ 340 ರನ್‌ಗಳ ಗುರಿಯನ್ನು ನೀಡಿತು. ಈ ಬೃಹರ್ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭದಲ್ಲಿ ಹಿನ್ನಡೆ ಅನುಭವಿಸಿತು.
Priceless #WTC25 points as Australia take a 2-1 lead over India with a tremendous win in Melbourne 👊#AUSvIND 📝: https://t.co/V3bDj8LroF pic.twitter.com/UuRprdPw6a
— ICC (@ICC) December 30, 2024
ನಾಯಕ ರೋಹಿತ್ ಶರ್ಮಾ (9), ವಿರಾಟ್ ಕೊಹ್ಲಿ (5) ಮತ್ತು ಕೆಎಲ್ ರಾಹುಲ್ (0) ಎರಡನೇ ಇನ್ನಿಂಗ್ಸ್ನಲ್ಲೂ ವಿಫಲರಾದರು. ಇದರಿಂದಾಗಿ ಭಾರತ ಭೋಜನ ವಿರಾಮದ ವೇಳೆಗೆ 33ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇನ್ನೂ 70 ಓವರ್‌ಗಳು ಬಾಕಿ ಇರುವಾಗಲೇ ಭಾರತ ಸೋಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಹಿರಿಯ ಬ್ಯಾಟ್ಸ್‌ಮನ್‌ಗಳು ವಿಫಲರಾದರೂ ಯುವ ಬ್ಯಾಟರ್ಗಳಾದ ಯಶಸ್ವಿ ಜೈಶ್ವಾಲ್ ಮತ್ತು ರಿಷಭ್ ಪಂತ್ ಕಾಂಗರೂ ಪಡೆ ವಿರುದ್ಧ ಹೋರಾಟ ನಡೆಸಿದರು. ಎರಡನೇ ಸೆಷನ್‌ನಲ್ಲಿ ಇಬ್ಬರೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದರು. ಇದರಿಂದಾಗಿ ಎರಡನೇ ಸೆಷನ್‌ನಲ್ಲಿ ಆಸ್ಟ್ರೇಲಿಯಾಗೆ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಇದರಿಂದಾಗಿ ಐದನೇ ದಿನದ ಎರಡನೇ ಸೆಷನ್‌ನಲ್ಲಿ ಭಾರತ 27.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 79 ರನ್ ಕಲೆಹಾಕಿತು. ಐದನೇ ದಿನದ ಚಹಾ ವಿರಾಮದ ವೇಳೆಗೆ 112/3 ರನ್ ಕಲೆಹಾಕಿ ಪಂದ್ಯದ ಮೇಲೂ ಹಿಡಿತ ಸಾಧಿಸಲಾರಂಭಿಸಿತು.
ಆದರೆ, ಮೂರನೇ ಸೆಷನ್ ಆರಂಭವಾಗುತ್ತಿದ್ದಂತೆ, ಭಾರತಕ್ಕೆ ಕಾಂಗರೂ ಪಡೆ ಶಾಕ್ ನೀಡಿತು. 30 ರನ್ ಗಳಿಸಿದ್ದ ರಿಷಭ್ ಪಂತ್ ಟ್ರಾವಿಸ್ ಹೆಡ್ ಬೌಲಿಂಗ್ನಲ್ಲಿ ಬೌಂಡರಿ ಬಾರಿಸಲು ಯತ್ನಿಸಿ ಕ್ಯಾಚೌಟ್ ಆಗಿ ಪೆವಿಲಿಯನ್ ಸೇರಿದರು. ಇಲ್ಲಿಂದ ಭಾರತದ ಪತನ ಆರಂಭವಾಯ್ತು.
ನಂತರ ಬಂದ ಜಡೇಜಾ, ಮೊದಲ ಇನಿಂಗ್ಸ್‌ನ ಶತಕವೀರ ನಿತೀಶ್ ರೆಡ್ಡಿ, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಒಂದೇ ಅಂಕೆಗೆ ಪೆವಿಲಿಯನ್ ದಾರಿ ಹಿಡಿದರು. ಅಂಪೈರ್ ವಿವಾದಾತ್ಮಕ ತೀರ್ಪಿನಿಂದಾಗಿ ಜೈಶ್ವಾಲ್ (84) ಕೂಡ ಪೆವಿಲಿಯನ್ ಸೇರಿದರು. ಇದರೊಂದಿಗೆ ಭಾರತ 155 ರನ್‌ಗಳಿಗೆ ಆಲೌಟ್ ಆಯಿತು.
ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ಭಾರತ 4ನೇ ಪಂದ್ಯದಲ್ಲಿ ಸೋಲಿನ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ನೇರವಾಗಿ ಫೈನಲ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದೆ. ಟೀಂ ಇಂಡಿಯಾ WTC ಫೈನಲ್ ಪ್ರವೇಶದ ಹಣೆ ಬರಹ ನಿರ್ಧಾರ, ಶ್ರೀಲಂಕಾ ತಂಡದ ಸೋಲು - ಗೆಲುವಿನ ಮೇಲೆ ಅವಲಂಬಿತವಾಗಿದೆ.
ಇದನ್ನೂ ಓದಿ: ಬುಮ್ರಾ, ಸಿರಾಜ್ ಮಾಡಿದ ಆ ಒಂದು ತಪ್ಪಿನಿಂದ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ!