ನವದೆಹಲಿ: ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗುತ್ತಿದ್ದಂತೆ ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ಲೀಗ್ (ಎನ್‌ಸಿಎಲ್) ನಿಷೇಧಿಸಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅಮೆರಿಕ ಕ್ರಿಕೆಟ್ ಪ್ರಸಿದ್ಧಿ ಪಡೆಯುತ್ತಿದೆ. ಐಸಿಸಿ ಈವೆಂಟ್ಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಕ್ರಿಕೆಟ್ ಅನ್ನು ಅಮೆರಿಕದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲೆಂದು ಅಮೆರಿಕ ಕ್ರಿಕೆಟ್ ಲೀಗ್ ನಡೆಸಲಾಗುತ್ತಿತ್ತು. ಇದೀಗ ಐಸಿಸಿ ಅಲ್ಲಿನ ಲೀಗ್ ನಿಷೇಧಿಸಿದೆ.
ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಸಿ, ಎನ್‌ಸಿಎಲ್ ಅನ್ನು ನಿಷೇಧಿಸಿದೆ. ಕ್ರಿಕ್ಬಜ್ ವರದಿ ಪ್ರಕಾರ, ಅಮೆರಿಕದ ನ್ಯಾಷನಲ್ ಕ್ರಿಕೆಟ್ ಲೀಗ್‌ನಲ್ಲಿ ಐಸಿಸಿ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗಿದೆ. ಪ್ಲೇಯಿಂಗ್ ಇಲೆವೆನ್ನಲ್ಲಿ ಅರ್ಧಕ್ಕಿಂತ ಹೆಚ್ಚು ವಿದೇಶಿ ಆಟಗಾರರು ಆಡುತ್ತಿದ್ದರು. ಕಳೆದ ವರ್ಷ, ವಿಶ್ವದಾದ್ಯಂತ ಟಿ20 ಮತ್ತು ಟಿ10 ಲೀಗ್‌ಗಳನ್ನು ಅನುಮೋದಿಸುವುದರ ಜೊತೆಗೆ, ಐಸಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚನೆ ನೀಡಿತ್ತು. ಆದರೆ ಕೇವಲ ಒಂದು ವರ್ಷದ ನಂತರ ಅಮೆರಿಕದ ರಾಷ್ಟ್ರೀಯ ಕ್ರಿಕೆಟ್ ಲೀಗ್ ನಿಯಮಗಳನ್ನು ಅನುಸರಿಸದ ಕಾರಣ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಮುಂದಿನ ಆವೃತ್ತಿಯ ಲೀಗ್ ಅನ್ನು ಅನುಮತಿಸದಿರುವ ನಿರ್ಧಾರವನ್ನು ಐಸಿಸಿಯು ಯುಎಸ್ಎ ಕ್ರಿಕೆಟ್ (USAC)ಗೆ ಪತ್ರದ ಮೂಲಕ ತಿಳಿಸಿದೆ. ಮುಖ್ಯವಾಗಿ, ಪ್ಲೇಯಿಂಗ್ ಇಲೆವೆನ್ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಲೀಗ್‌ನಲ್ಲಿ ಆಡುವ ಪ್ರತೀ ತಂಡವೂ ಕನಿಷ್ಠ ಏಳು ಅಮೆರಿಕನ್ ಆಟಗಾರರು ಮತ್ತು ನಾಲ್ಕು ವಿದೇಶಿ ಆಟಗಾರರನ್ನು ಹೊಂದಿರಬೇಕು ಎಂದು ಐಸಿಸಿ ಈ ಹಿಂದೆಯೇ ಸೂಚಿಸಿತ್ತು.
ಆದರೆ ತಂಡಗಳು ಈ ನಿಯಮವನ್ನು ಉಲ್ಲಂಘಿಸಿದ್ದವು. ಪ್ರತಿ ಪಂದ್ಯಗಳಲ್ಲಿ 4 ಕ್ಕಿಂತ ಹೆಚ್ಚಿನ ವಿದೇಶಿ ಆಟಗಾರರೊಂದಿಗೆ ಪಂದ್ಯಗಳನ್ನು ಆಡಿದ್ದವು. ಮತ್ತು ಕಳಪೆ ಪಿಚ್ನೊಂದಿಗೆ ಪಂದ್ಯ ನಡೆಸಲಾಗಿತ್ತು. ಇದರಿಂದಾಗಿ ವೇಗದ ಬೌಲರ್ಗಳು ಎಸೆದ ಚೆಂಡು ಅಪಯಕಾರಿಯಾಗಿ ತಿರುಗುತ್ತಿದ್ದವು ಮತ್ತು ಬೌನ್ಸ್ ಆಗುತ್ತಿದ್ದವು. ಬ್ಯಾಟರ್ಗಳಿಗೂ ಇದು ಅಪಯಕಾರಿ ಎಂದು ತಿಳಿದು ಬಂದಿತ್ತು. ಅಷ್ಟೇ ಅಲ್ಲದೇ, ವೀಸಾ ನಿಯಮಗಳನ್ನೂ ಉಲ್ಲಂಘಿಸಿರುವ ಆರೋಪಗಳು ಕೇಳಿ ಬಂದಿವೆ.
ವಾಸಿಂ ಅಕ್ರಮ್ ಮತ್ತು ವಿವಿಯನ್ ಡಿಚರ್ಡ್ಸ್ ರಾಯಭಾರಿ
ವಾಸಿಂ ಅಕ್ರಮ್ ಮತ್ತು ವಿವಿಯನ್ ರಿಚರ್ಡ್ಸ್ ಅವರಂತಹ ದಿಗ್ಗಜ ಆಟಗಾರರನ್ನು USA ನ್ಯಾಷನಲ್ ಕ್ರಿಕೆಟ್ ಲೀಗ್ಗೆ ಗೆ ಬ್ರ್ಯಾಂಡ್ ಅಂಬಾಸಿಡರ್‌ಗಳನ್ನಾಗಿ ಮಾಡಲಾಗಿದೆ. ಇದಷ್ಟೇ ಅಲ್ಲದೇ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಕೂಡ ತಂಡಗಳ ಮಾಲೀಕತ್ವದ ಗುಂಪಿನ ಭಾಗವಾಗಿದ್ದಾರೆ.
ಇದನ್ನೂ ಓದಿ: ನಿವೃತ್ತಿ ಪಡೆದರೂ ಕಡಿಮೆ ಆಗದ ಧೋನಿ ಕ್ರೇಜ್: 43ನೇ ವಯಸ್ಸಿನಲ್ಲೂ ಅಮಿತಾಬ್, ಶಾರುಕ್ ಹಿಂದಿಕ್ಕಿದ ಥಲಾ!