ಗುಜರಾತ್: ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿರುವ ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗುಜರಾತ್ನ ವೆರಾವಲ್‌ನಲ್ಲಿರುವ ಪುರಾಣ ಪ್ರಸಿದ್ಧ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಮುಂಬೈ ತಂಡ ಮತ್ತು ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಟೂರ್ನಿಯಲ್ಲಿ ಮಂಕಾಗಿದ್ದಾರೆ. ತಂಡದಲ್ಲಿ ಮೇಲ್ನೋಟಕ್ಕೆ ಒಗ್ಗಟ್ಟಿಗಿರುವುದು ಕಂಡುಬಂದರೂ ಬೂದಿ ಮುಚ್ಚಿದ ಕೆಂಡದಂತೆ ಅಸಮಾಧಾನ ಹೊಗೆಯಾಡುತ್ತಿದೆ. ಇದು ಹಾರ್ದಿಕ್ ಪಾಂಡ್ಯ ಅವರಿಗೆ ಸಮಸ್ಯೆಯಾಗಿ ಪರಿಣಮಿಸಿರಬಹುದು. ಹೀಗಾಗಿ ಅವರು ದೇವರ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. ದೇವಾಲಯದಲ್ಲಿ ಲಿಂಗಕ್ಕೆ ರುದ್ರಾಭಿಷೇಕ ಮಾಡಿದ ಅವರು ಪ್ರಾರ್ಥನೆ ಸಲ್ಲಿಸಿದರು.
2015ರಲ್ಲಿ ಐಪಿಎಲ್ಗೆ ಪಾದರ್ಪಣೆ ಮಾಡಿದ್ದ ಹಾರ್ದಿಕ್, ಆರಂಭದಿಂದ 2021ರವರೆಗೆ ಮುಂಬೈ ಪರ ಆಡುವ ಮೂಲಕ ಆನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಈ ಉತ್ತಮ ಪ್ರದರ್ಶನದಿಂದಲೇ ಟೀಮ್ ಇಂಡಿಯಾದಲ್ಲೂ ಸ್ಥಾನ ಸಿಕ್ಕಿತ್ತು. ಏಪ್ಯಾ ಕಪ್, 2019 ಮತ್ತು 2024ರ ಏಕದಿನ ವಿಶ್ವಕಪ್ ಹಾಗು ಟಿ20 ವಿಶ್ವಕಪ್ನಲ್ಲಿಯೂ ಭಾರತದ ಭಾಗವಾಗಿದ್ದರು. ಆದರೆ ಈ ಎಲ್ಲಾ ಪ್ರಮುಖ ಟೂರ್ನಿಗಳಲ್ಲೂ ಪಾಂಡ್ಯ ಹಲವು ಗಾಯದ ಸಮಸ್ಯೆಗಳನ್ನು ಎದುರಿಸಿದ್ದಾರೆ. ನಂತರ ಫಿಟ್ ಆಗಿ ಬಂದು ಭಾರತವನ್ನು ಪ್ರತಿನಿಧಿಸಿದ್ದಾರೆ.
2021ರ ನಂತರ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಫ್ರಾಂಚೈಸಿ ಕೈಬಿಟ್ಟಿತ್ತು. 2022ರಲ್ಲಿ ಮೊದಲ ಬಾರಿಗೆ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಮಿಂಚಿದ್ದರು. ಅಲ್ಲದೇ ಮೊದಲ ಋತುವಿನಲ್ಲೇ ತಂಡವನ್ನು ಚಾಂಪಿಯನ್ ಮಾಡಿದ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಬಳಿಕ ಕಳೆದ ಋತುವಿನಲ್ಲೂ ಜಿಟಿ ಅನ್ನು ರನ್ನರ್ ಆಪ್ ಮಾಡಿದ್ದರು. ಫೈನಲ್ನಲ್ಲಿ ಚೆನ್ನೈ ಎದುರು ಗುಜರಾತ್ ರೋಚಕವಾಗಿ ಸೆಣಸಾಡಿ ಸೋಲು ಕಂಡಿತ್ತು.
ಇದನ್ನೂ ಓದಿ: ಐಪಿಎಲ್: ಮುಂದಿನ ಪಂದ್ಯದಲ್ಲಿ ಮುಂಬೈ ಪರ ಈ ಆಟಗಾರ ಕಣಕ್ಕಿಳಿಯುವ ಸಾಧ್ಯತೆ! - Mumbai Indians