ಜಾರ್ಜ್‌ಟೌನ್ (ಗಯಾನಾ): 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರು ನಾಯಕನಾಗಿ ಭಾರತದ ತಂಡದ ಪರವಾಗಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಭಾರತ ತಂಡದ ಕ್ಯಾಪ್ಟನ್ ಆಗಿ ರೋಹಿತ್ ಮೂರು ಮಾದರಿಗಳ ಕ್ರಿಕೆಟ್‌ನಲ್ಲಿ 5 ಸಾವಿರಕ್ಕೂ ಹೆಚ್ಚು ರನ್ಗಳನ್ನು ಗಳಿಸಿದ್ದಾರೆ. ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸೌರವ್ ಗಂಗೂಲಿ ಅಂತಹ ದಿಗ್ಗಜ ಆಟಗಾರರ ಎಲೈಟ್ ಪಟ್ಟಿಯಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದುಕೊಂಡಿದ್ದಾರೆ.
ಕ್ಯಾಪ್ಟನ್ ಆಗಿ 5 ಸಾವಿರ ಪ್ಲಸ್ ರನ್ ಗಳಿಸಿದ 5ನೇ ಆಟಗಾರ: ಭಾರತ ತಂಡದ ನಾಯಕನಾಗಿ ರೋಹಿತ್ ಮೂರು ಮಾದರಿಗಳ ಕ್ರಿಕೆಟ್‌ನಲ್ಲಿ 5 ಸಾವಿರ ರನ್ಗಳ ಗಡಿ ದಾಟಿರುವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 57 ರನ್ ಗಳಿಸುವ ಮೂಲಕ ಈ ವಿಶೇಷ ಸಾಧನೆ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಟೀ ಇಂಡಿಯಾ ಪರ ನಾಯಕನಾಗಿ 5 ಸಾವಿರ ಪ್ಲಸ್ ರನ್ ಗಳಿಸಿದ 5ನೇ ಆಟಗಾರ ಖ್ಯಾತಿಗೆ ಪಾತ್ರರಾಗಿದ್ದಾರೆ.
ಭಾರತ ತಂಡದ ನಾಯಕನಾಗಿ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ನಾಯಕನಾಗಿ ವಿರಾಟ್ ಕೊಹ್ಲಿ ಮೂರು ಮಾದರಿಗಳ ಕ್ರಿಕೆಟ್‌ನಲ್ಲಿ 12,883 ರನ್ ಗಳಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಎಂ.ಎಸ್. ಧೋನಿ ಅವರು ಇದ್ದು, 11,207 ರನ್ ಬಾರಿಸಿದ್ದಾರೆ. ಮೊಹಮ್ಮದ್ ಅಜರುದ್ದೀನ್ 8,095 ರನ್ ಹಾಗೂ ಸೌರವ್ ಗಂಗೂಲಿ 7,643 ರನ್ ಸಿಡಿಸಿ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ಈ ಆಟಗಾರರ ನಂತರದ ಸ್ಥಾನವನ್ನು ರೋಹಿತ್ ತಮ್ಮದಾಗಿಸಿಕೊಂಡಿದ್ದಾರೆ.
ಹಿಟ್ಮ್ಯಾನ್ ಮುಡಿಗೆ ಮತ್ತೊಂದು ವಿಶೇಷ ದಾಖಲೆ: 12 ತಿಂಗಳ ಅಂತರದಲ್ಲಿ ಮೂರು ಐಸಿಸಿಯ ಮೂರು ಫೈನಲ್‌ಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. 2023 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, 2023 ODI ವಿಶ್ವಕಪ್ ಮತ್ತು ಇದೀಗ T20 ವಿಶ್ವಕಪ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಿದ್ದಾರೆ.
ಟಿ20ಐ ಕ್ರಿಕೆಟ್‌ನಲ್ಲಿ 202 ಬಾರಿಸಿದ ಮೊದಲ ಆಟಗಾರ: ಜೂನ್ 28ರಂದು ಜಾರ್ಜ್ಟೌನ್ನಲ್ಲಿ ನಡೆದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಭಾರತದ ಮಧ್ಯೆ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 202 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ಅವರು ಕೆಲವು ಅದ್ಭುತ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮುಂಬೈಕರ್ ರೋಹಿತ್ ಅಬ್ಬರ ಬ್ಯಾಟಿಂಗ್ ಮಾಡುವ ಭಾರತದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ರೋಹಿತ್ ಶರ್ಮಾ 39 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸಿದರು. ನಾಗ್ಪುರ ಮೂಲದ ರೋಹಿತ್ ಅವರು ಈ ಪಂದ್ಯ ಉತ್ತಮ ಪ್ರದರ್ಶನ ನೀಡಿದರು. ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದ ಭಾರತೀಯ ಅಭಿಮಾನಿಗಳು ರೋಹಿತ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ಆನಂದಿಸಿದರು. ರೋಹಿತ್ ಟಿ20ಯಲ್ಲಿ 202 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನು ನಿರ್ಮಿಸಿದರು.