ನ್ಯೂಯಾರ್ಕ್: ಟಿ20 ವಿಶ್ವಕಪ್ ಗೆಲ್ಲುವ ಗುರಿ ಹೊಂದಿರುವ ಭಾರತ ತಂಡದಲ್ಲಿ ಬದಲಾವಣೆ ಗಾಳಿ ಬೀಸಿದೆ. ಐಪಿಎಲ್ ಮಾದರಿಯನ್ನೇ ಇಲ್ಲಿ ಬಳಸಿಕೊಂಡು ಯಶಸ್ಸು ಸಾಧಿಸಲು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಮುಂದಾಗಿದ್ದಾರೆ. ಜೊತೆಗೆ ತಂಡದ ಪ್ರದರ್ಶನದ ಬಗ್ಗೆಯೂ ಹೆಚ್ಚಿನ ನಂಬಿಕೆ ಹೊಂದಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯ ಮತ್ತು ಐರ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ದೊಡ್ಡ ಪಾಲುದಾರಿಕೆ ನೀಡಿಲ್ಲವಾದರೂ ಮುಂದಿನ ಪಂದ್ಯಗಳಲ್ಲಿ ಉತ್ತಮ ಜೊತೆಯಾಟ ನೀಡುವ ವಿಶ್ವಾಸ ಹೊಂದಿದ್ದಾರೆ.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರವಾಗಿ ವಿರಾಟ್ ಕೊಹ್ಲಿ ಆರಂಭಿಕರಾಗಿ ಬಂದು ರಾಶಿ ರಾಶಿ ರನ್ ಕಲೆ ಹಾಕಿದ್ದಾರೆ. ಹೀಗಾಗಿ ಕೊಹ್ಲಿಯನ್ನು ಆರಂಭಿಕರನ್ನಾಗಿ ಟೀಂ ಇಂಡಿಯಾದಲ್ಲಿ ಬಳಸಿಕೊಳ್ಳಲು ತರಬೇತುದಾರರು ಚಿಂತಿಸಿದ್ದಾರೆ.
ಮೂರರಲ್ಲಿ ಪಂತ್ ಫಿಕ್ಸ್: ವಿಕೆಟ್‌ಕೀಪರ್ ಕಮ್ ಬ್ಯಾಟರ್ ಆಗಿರುವ ರಿಷಭ್ ಪಂತ್ ಮೂರನೇ ಕ್ರಮಾಂಕದಲ್ಲಿ ಅದ್ಭುತವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಇದರಿಂದ ಅವರ ಸ್ಥಾನವನ್ನು ಬದಲಿಸಲು ತಂಡ ಸಿದ್ಧವಿಲ್ಲ. ಹೀಗಾಗಿ ಅವರನ್ನು ಮೂರನೇ ಕ್ರಮಾಂಕದಲ್ಲಿ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಟಿ20 ವಿಶ್ವಕಪ್‌ನ ಪೂರ್ತಿ ರಿಷಬ್ ಪಂತ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಹಾರ್ದಿಕ್ ಪಾಂಡ್ಯ ಸಂಪೂರ್ಣ ಫಿಟ್ ಆಗಿದ್ದು, ತಂಡಕ್ಕೆ ಪ್ಲಸ್ ಪಾಯಿಂಟ್ ಎಂದು ಹೇಳಿದ್ದಾರೆ.
ಪಂತ್ ಮತ್ತು ಪಾಂಡ್ಯ ಐಪಿಎಲ್ ಮೂಲಕ ಪುನರಾಗಮನ ಮಾಡಿದ್ದಾರೆ. ಇಬ್ಬರೂ ದೀರ್ಘ ಬಿಡುವಿನ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಸಾಧಿಸುವಲ್ಲಿ ಇಬ್ಬರೂ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ ಅವರನ್ನು ತಂಡ ಸಮರ್ಥವಾಗಿ ಬಳಸಿಕೊಳ್ಳಲಿದೆ ಎಂದರು.
ಐರ್ಲೆಂಡ್ ವಿರುದ್ಧ ಉತ್ತಮ ಬೌಲ್ ಮಾಡಿದ ಪಾಂಡ್ಯ 4 ಓವರ್‌ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದರು. ಅಭ್ಯಾಸ ಪಂದ್ಯದಲ್ಲೂ ಅವರು ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಪೂರ್ಣ 4 ಓವರ್‌ಗಳನ್ನು ಬೌಲ್ ಮಾಡುವಷ್ಟು ಫಿಟ್ ಆಗಿದ್ದಾರೆ. ಉತ್ತಮ ವೇಗದಲ್ಲಿ ನಿಖರವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಇದು ತಂಡಕ್ಕೆ ನೆರವಾಗಲಿದೆ ಎಂದು ಅವರು ಹೇಳಿದರು.
ಭಾರತ ತನ್ನ ಮುಂದಿನ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಜೂನ್ 9 ರಂದು ನ್ಯೂಯಾರ್ಕ್ ಮೈದಾನದಲ್ಲಿ ಆಡಲಿದೆ.
ಇದನ್ನೂ ಓದಿ: T20 World Cup 2024: ಐರ್ಲೆಂಡ್ ವಿರುದ್ಧ ಭಾರತಕ್ಕೆ ಸುಲಭ ಜಯ: ರೋಹಿತ್ ಪಡೆ ಶುಭಾರಂಭ - India Beat Ireland