ಬೆಂಗಳೂರು: ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾರತ ಎ ಹಾಗೂ ಭಾರತ ಬಿ ನಡುವಿನ ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಶುಭ್ಮನ್ ಗಿಲ್ ನೇತೃತ್ವದ ಭಾರತ ಎ ತಂಡದ ಪರ ಕಣಕ್ಕಿಳಿದಿರುವ ಕನ್ನಡಿಗ ಕೆ.ಎಲ್.ರಾಹುಲ್ ಟೆಸ್ಟ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ತವಕದಲ್ಲಿದ್ದಾರೆ.

ಜೀವನದ ಮೌಲ್ಯಗಳನ್ನು ಕಲಿಸಿದ ಗುರುಗಳನ್ನ ಸ್ಮರಿಸುವ ಶಿಕ್ಷಕರ ದಿನವಾದ ಇಂದು ತಮ್ಮ ಶಿಷ್ಯ ರಾಹುಲ್ ಆಟವನ್ನು ಕಣ್ತುಂಬಿಕೊಳ್ಳಲು ಅವರ ಗುರು ಸ್ಯಾಮ್ಯುಯೆಲ್ ಜಯರಾಜ್ ಮೈದಾನಕ್ಕೆ ಭೇಟಿ ನೀಡಿದ್ದಾರೆ. ವಿಶೇಷವೆಂದರೆ ಮೈದಾನದ ಪ್ರೇಕ್ಷಕರ ಗ್ಯಾಲರಿಯಲ್ಲಿ ಅಭಿಮಾನಿಗಳ ನಡುವೆ ಕುಳಿತು ಸ್ಯಾಮ್ಯುಯೆಲ್ ಜಯರಾಜ್ ಪಂದ್ಯ ವೀಕ್ಷಿಸಿದ್ದು, ಗಮನ ಸೆಳೆಯಿತು.
ಸ್ಯಾಮ್ಯುಯೆಲ್ ಜಯರಾಜ್ ಕರ್ನಾಟಕದ ಕ್ರಿಕೆಟ್ ವಲಯದಲ್ಲಿ ಚಿರಪರಿಚಿತ ಹೆಸರು. ಹತ್ತನೇ ವಯಸ್ಸಿಗೆ ಕ್ರಿಕೆಟ್ ಆರಂಭಿಸಿದ್ದ ಕೆ.ಎಲ್.ರಾಹುಲ್ ಅವರಿಗೆ ಜಯರಾಜ್ ಅವರೇ ಮೊದಲ ಗುರು. ಮಂಗಳೂರಿನ ನೆಹರು ಮೈದಾನದಲ್ಲಿ ಆರಂಭವಾದ ರಾಹುಲ್ ಕ್ರಿಕೆಟ್ ಜರ್ನಿ ಇಂದು ಅವರನ್ನ ಭಾರತ ತಂಡದ ಮೋಸ್ಟ್ ಡಿಪೆಂಡಬಲ್ ಕ್ರಿಕೆಟರ್ ಆಗಿ ತಂದು ನಿಲ್ಲಿಸಿದೆ.

ರಾಹುಲ್ ಮಾತ್ರವಲ್ಲದೇ ವೇಗಿ ವಿದ್ವತ್ ಕಾವೇರಪ್ಪ ಅವರ ಪಾಲಿನ ದ್ರೋಣಾಚಾರ್ಯ ಸಹ ಸ್ಯಾಮ್ಯುಯೆಲ್ ಜಯರಾಜ್ ಆಗಿದ್ದಾರೆ. ಗುರುಗಳನ್ನ ಸ್ಮರಿಸುವ ವಿಶೇಷ ದಿನವಾದ ಇಂದು ಶಿಷ್ಯನ ಆಟವನ್ನ ಕಣ್ತುಂಬಿಕೊಳ್ಳಲು ಜಯರಾಜ್ ಅವರು ಮೈದಾನದಲ್ಲಿ ಖುದ್ದು ಹಾಜರಿದ್ದದ್ದು ವಿಶೇಷವಾಗಿತ್ತು.